ದೇಶ

'ರಾಷ್ಟ್ರಪತ್ನಿ' ಹೇಳಿಕೆ: ನಿಲ್ಲದ ಪ್ರತಿಭಟನೆ; ಲೋಕಸಭೆ, ರಾಜ್ಯಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

Ramyashree GN

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಗೆ ಪ್ರತಿಪಕ್ಷಗಳು ಮತ್ತು ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆಯ ನಡುವೆಯೇ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಆಗಸ್ಟ್ 1ಕ್ಕೆ ಮುಂದೂಡಲಾಯಿತು.

ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಸದರು ಹಾಗೂ ಇತರ ಕೆಲವು ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಕಲಾಪವನ್ನು ಮೊದಲು 12 ಗಂಟೆಗೆ ಮುಂದೂಡಲಾಯಿತು. ಬಳಿಕ ಮತ್ತೆ ಸದನ ಸೇರಿದಾಗಲೂ ಇದೇ ದೃಶ್ಯಗಳು ಕಂಡುಬಂದವು.

ಸರ್ಬಾನಂದ ಸೋನೋವಾಲ್ ಸೇರಿದಂತೆ ಬಿಜೆಪಿಯ ಇತರ ಸದಸ್ಯರು ಮತ್ತು ಕೇಂದ್ರ ಸಚಿವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕ್ಷಮೆಯಾಚನೆಗೆ ಒತ್ತಾಯಿಸಿದರು.

ಅಧೀರ್ ರಂಜನ್ ಚೌಧರಿಯವರ 'ರಾಷ್ಟ್ರಪತ್ನಿ' ಹೇಳಿಕೆಯು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿತ್ತು. ಬಿಜೆಪಿಯು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿತು. ಚೌಧರಿ ಉದ್ದೇಶಪೂರ್ವಕವಾಗಿಯೇ ದ್ರೌಪದಿ ಮುರ್ಮು ಅವರಿಗೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿದರು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಇದು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತಿಕ್ಕಾಟಕ್ಕೆ ಕಾರಣವಾಯಿತು.

ಗದ್ದಲ ಮುಂದುವರಿದಾಗ ಸಭಾಪತಿ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರ್ವಾಲ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ರಾಜ್ಯಸಭೆ ಮುಂದೂಡಿಕೆ
ರಾಜ್ಯಸಭೆಯಲ್ಲೂ ರಾಷ್ಟ್ರಪತ್ನಿ ಹೇಳಿಕೆ ಪ್ರತಿಧ್ವನಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಹಗ್ಗಜಗ್ಗಾಟ ಮುಂದುವರಿದಿದ್ದರಿಂದ ರಾಜ್ಯಸಭೆ ಕಲಾಪವನ್ನು ಕೂಡ ಸೋಮವಾರಕ್ಕೆ ಮುಂದೂಡಲಾಯಿತು.

SCROLL FOR NEXT