ದೇಶ

ಸೋನಿಯಾ-ಸ್ಮೃತಿ ಮುಖಾಮುಖಿ: ಕೈ ಸಂಸದರ ಪ್ರತಿಭಟನೆ, ಸರ್ಕಾರದ ಕ್ಷಮೆಯಾಚನೆಗೆ ಒತ್ತಾಯ, ಬಿಜೆಪಿ ಪ್ರತಿದಾಳಿ

Nagaraja AB

ನವದೆಹಲಿ: ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ಪ್ರತಿಭಟನೆ ನಡುವೆ ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ, ಸರ್ಬಾನಂದ ಸೊನಾವಾಲ ಸೇರಿದಂತೆ ಸಚಿವರು, ಬಿಜೆಪಿ ಸದಸ್ಯರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಇದರಿಂದಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಗಿತ್ತು. ಮತ್ತೆ ಸಮಾವೇಶಗೊಂಡಾಗಲೂ ಇದೇ ರೀತಿಯ ಪರಿಸ್ಥಿತಿ ಮುಂದುವರೆಯಿತು.

 ದ್ರೌಪದಿ ಮುರ್ಮು ಅವರನ್ನು ಕುರಿತು ರಾಷ್ಟ್ರಪತ್ನಿ ಎಂದು ಚೌಧರಿ ನಿನ್ನೆ ನೀಡಿದ ಹೇಳಿಕೆ ಗುರುವಾರ ಸದನದಲ್ಲಿ ಭಾರೀ ರಂಪ, ರಾದ್ದಾಂತಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಇಂದು ಕೂಡಾ  ಪ್ರತಿಭಟನೆ, ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸಭಾಪತಿ ಪೀಠದಲ್ಲಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್ ವಾಲ್, ಕಾಗದ ಪತ್ರಗಳ ಮಂಡನೆ ಅವಕಾಶ ನೀಡಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಈ ಮಧ್ಯೆ,ರಾಷ್ಟ್ರಪತಿ ಕುರಿತು ಅಧೀರ್ ರಂಜನ್ ಚೌಧರಿ ನೀಡಿರುವ ಹೇಳಿಕೆ ಬಗ್ಗೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಿದ ನಂತರವೇ ಲೋಕಸಭೆ ಕಲಾಪ ನಡೆಯಲಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶುಕ್ರವಾರ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ದುಬೆ, ಬುಡಕಟ್ಟು ಸಮುದಾಯದವರನ್ನು ಅಪಮಾನ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ, ಸೋನಿಯಾ ಗಾಂಧಿ ಕ್ಷಣೆ ಯಾಚನೆ ನಂತರವಷ್ಟೇ ಲೋಕಸಭಾ ಕಲಾಪ ಮುಂದುವರೆಯಲಿದೆ ಎಂದಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂಸತ್ ನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿರುವ ಇತಿಹಾಸವಿದೆ. 2012ರಲ್ಲಿ ಗಾಂಧಿ ಕುಟುಂಬದ ನಂಬಿಕೆ ಕುರಿತು ಮಾತನಾಡಿದ್ದಕ್ಕೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್ ಶಿಂಗ್ ಅವರಿಗೆ ಕಾಂಗ್ರೆಸ್ 10 ನೋಟಿಸ್ ನೀಡಿತ್ತು ಎಂದು ದುಬೆ ಹೇಳಿದ್ದಾರೆ.

SCROLL FOR NEXT