ದೇಶ

ಶಿವಸೇನೆಯ ಬಣ ರಾಜಕೀಯ ಸಂಘರ್ಷದ ನಡುವೆ ಶಿಂಧೆ ಸರ್ಕಾರಕ್ಕೆ 1 ತಿಂಗಳು; ಸಂಪುಟ ವಿಸ್ತರಣೆ ಸುಳಿವೇ ಇಲ್ಲ! 

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 1 ತಿಂಗಳು ಪೂರ್ಣಗೊಂಡಿದ್ದು, ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. 

ಶಿವಸೇನೆ ಶಾಸಕರು ಮಹಾರಾಷ್ಟ್ರದ ಎಂವಿಎ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದ ಪರಿಣಾಮ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಉರುಳಿ ಜೂ.30 ರಂದು ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಶಿಂಧೆ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ತ್ವರಿತಗೊಳಿಸಿದ್ದರು. 

ಹೊಸ ಸರ್ಕಾರ ಔರಂಗಾಬಾದ್ ಹಾಗೂ ಒಸ್ಮಾನಾಬಾದ್ ನಗರಗಳನ್ನು ಛತ್ರಪತಿ ಸಂಭಾಜಿನಗರ್ ಹಾಗೂ ಧರಶಿವ್ ಎಂದು ಮರು ನಾಮಕರಣ ಮಾಡುವುದಕ್ಕೆ ಕ್ಯಾಬಿನೆಟ್ ಒಪ್ಪಿಗೆಯನ್ನೂ ನೀಡಿತ್ತು. ಇದಿಷ್ಟೇ ಅಲ್ಲದೇ 1975 ರ ತುರ್ತು ಪರಿಸ್ಥಿಯಲ್ಲಿ ಹೋರಾಡಿದ್ದ ರಾಜಕೀಯ ಕಾರ್ಯಕರ್ತರ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವುದೂ ಸೇರಿದಂತೆ ಒಂದು ತಿಂಗಳ ಅವಧಿಯಲ್ಲಿ ಶಿಂಧೆ ಸರ್ಕಾರ ಮಹತ್ವದ ಕ್ರಮಗಳನ್ನು ಹಾಗೂ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಿಧಾನಗತಿಯಲ್ಲಿದ್ದ ಯೋಜನೆಗಳನ್ನು ತ್ವರಿತಗೊಳಿಸಿ, ರದ್ದುಗೊಂಡಿದ್ದ ಯೋಜನೆಗಳ ಮರುಜಾರಿಯನ್ನು ಘೋಷಿಸಿದೆ. 

ಆದರೆ ಪೂರ್ಣಪ್ರಮಾಣದ ಸಚಿವ ಸಂಪುಟವೇ ಇಲ್ಲದೇ ಶಿಂಧೆ ಸರ್ಕಾರ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಈಗ ರಾಜಕೀಯ ಟೀಕೆಗೆ ಗುರಿಯಾಗಿದೆ. ಸರ್ಕಾರ ರಚನೆಯಾಗಿ ಒಂದು ತಿಂಗಳು ಪೂರ್ಣಗೊಂಡರೂ ಪೂರ್ಣಪ್ರಮಾಣದ ಸಚಿವ ಸಂಪುಟ ಇಲ್ಲದೇ ಇರುವುದನ್ನು ಈ ಸರ್ಕಾರಕ್ಕೆ ನಿರ್ದಿಷ್ಟ ಗುರಿಯೇ ಇಲ್ಲ ಎಂದು ವಿಪಕ್ಷಗಳು ಟೀಕಾ ಪ್ರಹಾರ ನಡೆಸಿವೆ. 

SCROLL FOR NEXT