ದೇಶ

ಎರಡನೇ ದಿನ ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ: ವಿಚಾರಣೆ ಮುಂದುವರಿಕೆ

Manjula VN

ನವದೆಹಲಿ: ನ್ಯಾಷನಲ್​​ ಹೆರಾಲ್ಡ್​​ ಪತ್ರಿಕೆ ಖರೀದಿ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಅವರು, ಮಂಗಳವಾರ 2ನೇ ದಿನದ ವಿಚಾರಣೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದು, ವಿಚಾರಣೆ ಮುಂದುವರೆದಿದೆ.

ರಾಹುಲ್ ಗಾಂಧಿ ಅವರು ತಮ್ಮ Z+ ವರ್ಗದ ಸಿಆರ್​ಪಿಎಫ್​ ಭದ್ರತಾ ಬೆಂಗಾವಲಿನೊಂದಿಗೆ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ ಪ್ರಧಾನ ಕಚೇರಿಗೆ ಆಗಮಿಸಿದರು. ಅವರೊಂದಿಗೆ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದರು.

ವಿಚಾರಣೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್​​ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಭದ್ರತಾ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೋಮವಾರದಂತೆಯೇ ಇಡಿ ಕಚೇರಿಯ ಸುತ್ತಲೂ ಸೆಕ್ಷನ್ 144 ಹೇರಲಾಗಿದೆ.

ನಿನ್ನೆ ಕೂಡ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಹುಲ್ ಗಾಂಧಿಯವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ವಿಚಾರಣೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇದರಂತೆ ಇಂದು ರಾಹುಲ್ ಗಾಂಧಿಯವರು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.

SCROLL FOR NEXT