ದೇಶ

'ಅಗ್ನಿಪಥ್' ಯೋಜನೆ ಟೀಕಿಸಿ ರಾಜನಾಥ್ ಸಿಂಗ್ ಗೆ ವರುಣ್ ಗಾಂಧಿ ಪತ್ರ

Nagaraja AB

ನವದೆಹಲಿ: ಕೇಂದ್ರ ಸರ್ಕಾರದ ಗುತ್ತಿಗೆ ಆಧಾರದ ಅಲ್ವಾವಧಿಯ ಸೇನಾ ನೇಮಕಾತಿ ಯೋಜನೆ 'ಅಗ್ನಿಪಥದ ವಿವಿಧ ವಿನಾಯಿತಿಗಳನ್ನು ಗುರುವಾರ  ಪ್ರಶ್ನಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದು ಯುವಕರಲ್ಲಿ ಹೆಚ್ಚಿನ ಅಸಮಾಧಾನವನ್ನು ಹುಟ್ಟುಹಾಕಲಿದ್ದು, ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ. 

ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ವರುಣ್ ಗಾಂಧಿ,  ಸೈನಿಕರ ನೇಮಕಾತಿ ಪ್ರಕ್ರಿಯೆಯಲ್ಲಿನ ಆಮೂಲಾಗ್ರ ಬದಲಾವಣೆಗಳ ಬಗ್ಗೆ ಯುವ ಜನತೆ  ಪ್ರಶ್ನೆಗಳು ಮತ್ತು ಅನುಮಾನಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಯೋಜನೆಯಡಿಯಲ್ಲಿ ನೇಮಕಗೊಂಡ ಶೇ. 75 ರಷ್ಟು ಯುವಕರು ಪಿಂಚಣಿ ಇಲ್ಲದೆ ನಾಲ್ಕು ವರ್ಷದ ನಂತರ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಇವರು  ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ನಿರುದ್ಯೋಗಿಯಾಗುತ್ತಾರೆ. ಪ್ರತಿ ವರ್ಷ ಇಂತವರ ಸಂಖ್ಯೆ ಹೆಚ್ಚಾಗಲಿದ್ದು, ಯುವ ಜನತೆಯಲ್ಲಿ ಹೆಚ್ಚಿನ ಅಸಮಾಧಾನವನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.

15 ವರ್ಷಗಳ ನಂತರ ನಿವೃತ್ತರಾಗುವ ಸಾಮಾನ್ಯ ಸೈನಿಕರನ್ನೂ ಸಹ ಕಾರ್ಪೊರೇಟ್ ವಲಯವು ನೇಮಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸದಿರುವಾಗ ಈ ನಿವೃತ್ತ ಸೈನಿಕರ ಭವಿಷ್ಯವೇನು ಎಂದು ಅವರು ಕೇಳಿದ್ದಾರೆ.

ನಾಲ್ಕು ವರ್ಷಗಳ ಸೇವೆಯು ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತದೆ, ಮತ್ತು ಅವರು ಅದೇ ಅರ್ಹತೆ ಹೊಂದಿರುವ ಇತರರಿಗಿಂತ ಹಿರಿಯರಾಗಿರುವುದರಿಂದ ಅವರು ಬೇರೆ ಉದ್ಯೋಗ ಅಥವಾ ಹೆಚ್ಚಿನ ಶಿಕ್ಷಣವನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ, ಅವರು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವರುಣ್ ಗಾಂಧಿ ಹೇಳಿದ್ದಾರೆ. 

ನಾಲ್ಕು ವರ್ಷಗಳ ನಂತರ ಕೇವಲ ಶೇ. 25 ರಷ್ಟು ಅಗ್ನಿವೀರರು ಮಾತ್ರ ಸೇವೆಯಲ್ಲಿ  ಮುಂದುವರಿಯುವುದರಿಂದ, ಈ ಯೋಜನೆಯು ತರಬೇತಿ ವೆಚ್ಚವನ್ನು ವ್ಯರ್ಥ ಮಾಡುತ್ತದೆ ಮತ್ತು ರಕ್ಷಣಾ ಬಜೆಟ್‌ನಲ್ಲಿ ಅನಗತ್ಯ ಹೊರೆಯಾಗಿದೆ ಎಂದು ಅವರು ಸಿಂಗ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಸರ್ಕಾರ ನಿರುದ್ಯೋಗಿ ಯುವಕರ ಹಿತಾಸಕ್ತಿಯನ್ನು ಕಾಪಾಡಬೇಕು ಮತ್ತು ಈ ಉಪಕ್ರಮದ ವಿವಿಧ ಅಂಶಗಳನ್ನು ಹೊರತರಬೇಕು ಎಂದು ವರುಣ್ ಗಾಂಧಿ ಒತ್ತಾಯಿಸಿದ್ದಾರೆ.

SCROLL FOR NEXT