ಸಂಗ್ರಹ ಚಿತ್ರ 
ದೇಶ

ಅಗ್ನಿಪಥ್: 4 ವರ್ಷ ಅಗ್ನಿವೀರ ಸೇವೆ ಸಲ್ಲಿಸಿದವರಿಗೆ ಪೊಲೀಸ್ ಇಲಾಖೆ ಹುದ್ದೆಯ ಅವಕಾಶ; ಉ.ಪ್ರದೇಶ ಸೇರಿ ಹಲವು ರಾಜ್ಯಗಳ ಚಿಂತನೆ!

ಕೇಂದ್ರ ಸರ್ಕಾರದ ಉದ್ದೇಶಿತ ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಯೋಜನೆಯಡಿಯಲ್ಲಿ  4 ವರ್ಷ ಅಗ್ನಿವೀರ ಸೇವೆ ಸಲ್ಲಿಸಿದವರಿಗೆ ಪೊಲೀಸ್ ಇಲಾಖೆ ಹುದ್ದೆಯ ಅವಕಾಶ ನೀಡುವ ಕುರಿತು ವಿವಿಧ ರಾಜ್ಯ ಸರ್ಕಾರಗಳು ಚಿಂತನೆಯಲ್ಲಿ ತೊಡಗಿವೆ.

ನವದೆಹಲಿ: ಕೇಂದ್ರ ಸರ್ಕಾರದ ಉದ್ದೇಶಿತ ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಯೋಜನೆಯಡಿಯಲ್ಲಿ  4 ವರ್ಷ ಅಗ್ನಿವೀರ ಸೇವೆ ಸಲ್ಲಿಸಿದವರಿಗೆ ಪೊಲೀಸ್ ಇಲಾಖೆ ಹುದ್ದೆಯ ಅವಕಾಶ ನೀಡುವ ಕುರಿತು ವಿವಿಧ ರಾಜ್ಯ ಸರ್ಕಾರಗಳು ಚಿಂತನೆಯಲ್ಲಿ ತೊಡಗಿವೆ.

ಇದಕ್ಕೆ ಇಂಬು ನೀಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, 'ಗೌರವಾನ್ವಿತ ಪ್ರಧಾನಮಂತ್ರಿಗಳ ಆಶಯದಂತೆ, 'ಅಗ್ನಿಪಥ್ ಯೋಜನೆ' ಯುವಕರನ್ನು ರಾಷ್ಟ್ರ ಮತ್ತು ಸಮಾಜದ ಸೇವೆಗೆ ಸಿದ್ಧಪಡಿಸುತ್ತದೆ, ಅವರಿಗೆ ಹೆಮ್ಮೆಯ ಭವಿಷ್ಯದ ಅವಕಾಶವನ್ನು ನೀಡುತ್ತದೆ. ಉತ್ತರ ಪ್ರದೇಶ ಪೋಲೀಸ್ ಮತ್ತು ಮಿತ್ರ ಪಡೆಗಳಲ್ಲಿ ಪೋಸ್ಟ್ ಸರ್ವಿಸ್ ಹೊಂದಾಣಿಕೆಯಲ್ಲಿ 'ಅಗ್ನಿವೀರ್'ಗಳಿಗೆ ಆದ್ಯತೆ ನೀಡಲಾಗುವುದು ಎಂದು ಈ ಮೂಲಕ ಭರವಸೆ ನೀಡುತ್ತೇವೆ.

ಯುವ ಒಡನಾಡಿಗಳೇ, 'ಅಗ್ನಿಪಥ್ ಯೋಜನೆ' ನಿಮ್ಮ ಜೀವನಕ್ಕೆ ಹೊಸ ಆಯಾಮವನ್ನು ನೀಡುವುದರ ಜೊತೆಗೆ ಭವಿಷ್ಯಕ್ಕೆ ಚಿನ್ನದ ನೆಲೆಯನ್ನು ನೀಡುತ್ತದೆ. ಇತರರ ಮಾತು ಕೇಳಿ ಮೋಸ ಹೋಗಬೇಡಿ. ಉತ್ತರ ಪ್ರದೇಶ ಸರ್ಕಾರ ಪೊಲೀಸ್ ಮತ್ತು ಇತರ ಸೇವೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲೂ ಚಿಂತನೆ
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಆಧಾರದಲ್ಲಿ ಅಗ್ನಿವೀರ ಹುದ್ದೆಗೆ ಸೇರುವ ಅಭ್ಯರ್ಥಿಗಳಿಗೆ, 4 ವರ್ಷ ಸೇವೆ ಮುಗಿಸಿ ಹಿಂದಿರುಗಿದಾಗ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿಶೇಷ ಅವಕಾಶ ನೀಡುವ ಕುರಿತು ಕರ್ನಾಟಕ ಸರ್ಕಾರ ಕೂಡ ಚಿಂತನೆ ನಡೆಸಿದೆ. ಈ ವಿಶೇಷ ಅವಕಾಶ ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆಗಳು ಶೇಕಡ.99 ರಷ್ಟು ಹೆಚ್ಚಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಹಲವು ರಾಜ್ಯ ಸರ್ಕಾರಗಳು ಈ ಬಗ್ಗೆ ಚಿಂತಿಸಿವೆ. ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿ ಅಗ್ನಿವೀರರಿಗೆ ಯಾವ ರೀತಿ ಅವಕಾಶ ನೀಡಬಹುದು ಎಂಬ ಬಗ್ಗೆ ಇಲಾಖಾ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

ಕೇಂದ್ರ ಸರ್ಕಾರ ಮಂಗಳವಾರವಷ್ಟೇ ಅಗ್ನಿಪಥ ಯೋಜನೆಯನ್ನು ಪ್ರಕಟಿಸಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದ ಹಾಗೂ ಹದಿನೇಳೂವರೆ ವರ್ಷದಿಂದ 21 ವರ್ಷ ಮೀರದ ಅಭ್ಯರ್ಥಿಗಳಿಗೆ ಸೇನೆಗೆ ಸೇರಲು ಅವಕಾಶ ನೀಡುವುದಾಗಿ ಘೋಷಿಸಿದೆ. ಈ ಹುದ್ದೆಗೆ ಅಗ್ನಿವೀರರಾಗಿ ಹೆಸರು ನೀಡಿದ್ದು, 4 ವರ್ಷ ಸೇವೆಯ ಅವಧಿ ಇರುತ್ತದೆ. ಈ ಅವಧಿಯಲ್ಲಿ ಮೊದಲ ವರ್ಷದಿಂದ 30 ಸಾವಿರ ವೇತನ, ನಾಲ್ಕನೇ ವರ್ಷ 40 ಸಾವಿರ ವೇತನ ನೀಡಲಿದ್ದು, ವಿಶೇಷ ಭತ್ಯೆಗಳು, ಪರಿಹಾರಗಳ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದೆ. 

ಕರ್ನಾಟಕ ಅಗ್ನಿವೀರರಿಗೆ ಪೊಲೀಸ್ ಇಲಾಖೆ ಹುದ್ದೆ
ಕರ್ನಾಟಕ ರಾಜ್ಯ ಸರ್ಕಾರವು ಅಗ್ನಿವೀರ ಹುದ್ದೆಯಿಂದ ನಾಲ್ಕು ವರ್ಷದ ನಂತರ ನಿರ್ಗಮಿಸುವ ಕನ್ನಡಿಗರಿಗೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡುವ ಬಗ್ಗೆ ಆಸಕ್ತಿ ತೋರಿದೆ. ಅವರನ್ನು ನೇಮಕ ಮಾಡಿಕೊಳ್ಳಲು ಯಾವ ರೀತಿ ಅವಕಾಶ ಸಿಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಹಿರಿಯ ಅಧಿಕಾರಿಗಳೊಟ್ಟಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾಕೆ ಈ ಚಿಂತನೆ? 
ಅಗ್ನಿವೀರ ಹುದ್ದೆಗೆ ಸೇರಲು 21 ವರ್ಷ ಗರಿಷ್ಠ ವಯೋಮಿತಿ ನಿಗಧಿಯಾಗಿದೆ. 21ನೇ ವರ್ಷ ಪೂರ್ಣಗೊಳ್ಳುವ ಮುನ್ನ ಅಗ್ನಿವೀರ ಹುದ್ದೆಗೆ ಸೇರಿದರು 25 ವರ್ಷದೊಳಗೆ ಹುದ್ದೆಯಿಂದ ನಿರ್ಗಮಿಸುತ್ತಾರೆ. ಅಗ್ನಿವೀರರು ಸೇನೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಉತ್ತಮ ತರಬೇತಿ ಪಡೆಯುತ್ತಾರೆ. ಸದೃಡವಾಗಿರುತ್ತಾರೆ. ಅಲ್ಲದೇ ಕೌಶಲ ಆಧಾರಿತ ಪದವಿ ಕೋರ್ಸ್‌ ಅನ್ನು ಕರ್ತವ್ಯದ ಜತೆಗೆಯೇ ಪಡೆಯುವ ಕಾರಣ, ಈ ಅಭ್ಯರ್ಥಿಗಳು 4 ವರ್ಷ ಸೇವೆ ಸಲ್ಲಿಸಿ ಹಿಂದಿರಿಗಿದಾಗ ಅವರಿಗೆ ಪೊಲೀಸ್‌ ಇಲಾಖೆಯಲ್ಲಿ ಹೇಗೆ ಅವಕಾಶ ನೀಡಬಹುದು ಎಂಬುದರ ಬಗ್ಗೆ ಹಲವು ರಾಜ್ಯ ಸರ್ಕಾರಗಳು ಚಿಂತನೆ ನಡೆಸುತ್ತಿವೆ ಎನ್ನಲಾಗಿದೆ. ಆದ್ದರಿಂದ ಅಗ್ನಿವೀರ ಹುದ್ದೆ ಸೇರಿದವರಿಗೆ ನಾಲ್ಕು ವರ್ಷದ ನಂತರ ವಿಶೇಷ ಅವಕಾಶ ಮೂಲಕ ಪೊಲೀಸ್ ಇಲಾಖೆ ಹುದ್ದೆಗಳು ಸಿಗುವ ಅವಕಾಶಗಳ ಸಾಧ್ಯತೆ ಹೆಚ್ಚಿದೆ. 

ಅಗ್ನಿವೀರರಿಗೆ ಪೊಲೀಸ್‌ ಇಲಾಖೆಯಲ್ಲಿ ಮೀಸಲಾತಿಗೆ ಚಿಂತನೆ
ಅವರು ಪೊಲೀಸ್‌ ಇಲಾಖೆ ಸೇರಲು ವಯಸ್ಸಿನ ಅಡಚಣೆ ಆಗದು. ಈ ಹಿನ್ನೆಲೆಯಲ್ಲಿ ಅವರು ಸಹ ಪೊಲೀಸ್ ಇಲಾಖೆಗೆ ಸೇರಬಹುದು. ಜತೆಗೆ ಪದವಿ ಶಿಕ್ಷಣವು ಸಿಕ್ಕಿರುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಶಿಸ್ತು, ಕೌಶಲ, ದೈಹಿಕ ಸಧೃಡತೆ ಇರುವ ಯುವಕರೇ ಪೊಲೀಸ್ ಇಲಾಖೆಗೆ ಸಿಕ್ಕಂತಾಗುತ್ತದೆ. ಪ್ರಸ್ತುತ ನೇಮಕ ಬಳಿಕ 8 ತಿಂಗಳು ಪೊಲೀಸ್ ಇಲಾಖೆಯಲ್ಲಿ ತರಬೇತಿ ನೀಡಿ ಸೇವೆಗೆ ಬಳಸಲಾಗುತ್ತದೆ. ಸೈನ್ಯದಿಂದ ಬಂದವರಾದರೆ ತರಬೇತಿಯ ಅಗತ್ಯವೇ ಇರುವುದಿಲ್ಲ. ಹಾಗೆಯೇ, ಕೌಶಲ ಪ್ರಮಾಣ ಪತ್ರ ಕೂಡ ಅವರ ಬಳಿ ಇರಲಿದೆ. ಹೀಗಾಗಿ ಇಲಾಖೆಗೆ ಹೆಚ್ಚಿನ ಲಾಭವಾಗಲಿದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಪಟ್ಟಿದೆ. ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಮಾಡಿದವರಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ಕೊಡುವುದರಿಂದ ಇಲಾಖೆಯಲ್ಲಿ ಶಿಸ್ತುಕೂಡ ಹೆಚ್ಚಲಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT