ದೇಶ

ಉಸಿರಾಟ ಸಂಬಂಧಿ ಸೋಂಕು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಕೆ

Sumana Upadhyaya

ನವದೆಹಲಿ: ಕೋವಿಡ್-19 ಸೋಂಕಿನಿಂದ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಲ್ಲಿ ಉಸಿರಾಟ ಸಂಬಂಧಿ ಸೋಂಕು ಕಾಸಿಕೊಂಡಿದ್ದು,ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಕೋವಿಡ್ ಸೋಂಕಿನ ನಂತರ ಮೂಗಿನಲ್ಲಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರು ಜೂನ್ 12ರಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರು ಎಂದು ಕಾಂಗ್ರೆಸ್ ನ ಮುಖ್ಯ ವಕ್ತಾರ ಜೈರಾಂ ರಮೇಶ್ ತಿಳಿಸಿದ್ದಾರೆ.

ಕೂಡಲೇ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಯಿತು. ನಿನ್ನೆ ಬೆಳಿಗ್ಗೆ ಸೋಂಕು ಸಂಬಂಧಿತ ಫಾಲೋ ಅಪ್ ತಪಾಸಣೆಯನ್ನು ವೈದ್ಯರು ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಾಖಲಾತಿ ಸಂದರ್ಭದಲ್ಲಿ ಅವರಲ್ಲಿ ಲೋವರ್ ರೆಸ್ಪಿರೇಟರಿ ಟ್ರ್ಯಾಕ್ಟ್‌ನಲ್ಲಿ ಶಿಲೀಂದ್ರ ಸೋಂಕು (ಶ್ವಾಸಕೋಶ ಸೋಂಕು) ಕೂಡ ಪತ್ತೆಯಾಗಿದೆ. ಅವರಿಗೆ ಪ್ರಸ್ತುತ ಇತರೆ ಕೋವಿಡ್ ನಂತರದ ಲಕ್ಷಣಗಳ ಜತೆಗೆ ಈ ಸಮಸ್ಯೆಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾದಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೂನ್ 23ರಂದು ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. ಅವರ ಪುತ್ರ ಮತ್ತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈಗಾಗಲೇ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದ್ದು, ಸೋಮವಾರ ಇಡಿ ಮುಂದೆ ಅವರ ಮುಂದಿನ ವಿಚಾರಣೆ ನಿಗದಿಯಾಗಿದೆ. 

SCROLL FOR NEXT