ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಸಭೆ 
ದೇಶ

ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಉಗ್ರ ಪ್ರತಿಭಟನೆ; ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಸಭೆ

ಭಾರತೀಯ ಸೇನೆಗೆ ಈ ವರ್ಷ 17 ರಿಂದ 23 ವರ್ಷದೊಳಗಿನ 46,000 ಯುವಕರನ್ನು ನೇಮಿಸಿಕೊಳ್ಳಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ...

ನವದೆಹಲಿ: ಭಾರತೀಯ ಸೇನೆಗೆ ಈ ವರ್ಷ 17 ರಿಂದ 23 ವರ್ಷದೊಳಗಿನ 46,000 ಯುವಕರನ್ನು ನೇಮಿಸಿಕೊಳ್ಳಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ತುರ್ತು ಸಭೆ ನಡೆಸಿದರು.

ಕಳೆದ ಮೂರು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಯುವಜನರಿಂದ ತೀವ್ರ ಪ್ರತಿಭಟನೆಗಳು ನಡೆದಿದ್ದು, ಪ್ರತಿಪಕ್ಷಗಳು ಯೋಜನೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿವೆ. ಶನಿವಾರ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಟೆಡ್ 24 ಗಂಟೆಗಳ ಬಿಹಾರ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನೆಯ ಕೇಂದ್ರಬಿಂದುವಾಗಿದೆ. ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರು ಇಂದು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ಸೇನಾಪಡೆಯ ಉಪ ಮುಖ್ಯಸ್ಥ ಜನರಲ್ ಬಿಎಸ್ ರಾಜು ಅವರು ಭಾಗವಹಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಅಧಿಕೃತ ಪ್ರವಾಸದ ಮೇಲೆ ಹೈದರಾಬಾದ್‌ನಲ್ಲಿರುವ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ.

‘ಅಗ್ನಿಪಥ’ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವುದು ಮತ್ತು ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಮಾರ್ಗಗಳನ್ನು ಖಚಿತಪಡಿಸಿಕೊಳ್ಳುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಅಗ್ನಿಪಥ್ ವಿರುದ್ಧದ ಪ್ರತಿಭಟನೆ ತಣ್ಣಗಾಗಿಸಲು  ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನ ನೇಮಕಾತಿಯಲ್ಲಿ ಅಗ್ನಿವೀರ್‌ಗಳಿಗೆ ಶೇ. 10 ಮೀಸಲಾತಿಯನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಘೋಷಿಸಿದ ಬೆನ್ನಲ್ಲೇ ರಕ್ಷಣಾ ಸಚಿವರು ಮತ್ತು ಸೇವಾ ಮುಖ್ಯಸ್ಥರ ನಡುವೆ ಮಹತ್ವದ ಸಭೆ ನಡೆದಿದೆ.

ನಾಲ್ಕು ವರ್ಷಗಳ ಅವಧಿಗೆ ಯುವಕರನ್ನು ಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ನೇಮಕ ಮಾಡಿಕೊಳ್ಳುವ ಯೋಜನೆಯ ಬಗ್ಗೆ ಮೂವರು ಸೇವಾ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷಗಳ ಕೊನೆಯಲ್ಲಿ, ಅವರಲ್ಲಿ ಶೇ 25 ರಷ್ಟು ಮಂದಿಯನ್ನು ಉಳಿಸಿಕೊಳ್ಳಲಾಗುತ್ತದೆ ಮತ್ತು ಉಳಿದವರಿಗೆ ಅವರ ಭವಿಷ್ಯಕ್ಕಾಗಿ ಸಹಾಯವನ್ನು ಒದಗಿಸಲಾಗುತ್ತದೆ.

ಅಗ್ನಿಪಥ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಯುವಕರು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಐಎಎಫ್ ಮುಖ್ಯಸ್ಥ ಮಾರ್ಷಲ್ ವಿವೇಕ್ ರಾಮ್ ಚೌಧುರಿ ಶನಿವಾರ ಹೇಳಿದ್ದಾರೆ.

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮಾತನಾಡಿ, ಈ ಯೋಜನೆಯು ಯುವಕರಿಗೆ ಅವಕಾಶವನ್ನು ನೀಡುತ್ತದೆ ಮತ್ತು ಅವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ನಿರಂತರ ಪ್ರತಿರೋಧವಿದೆ ಎಂದಿದ್ದಾರೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಪ್ರತಿಭಟನೆಯನ್ನು ನಿರೀಕ್ಷಿಸಿರಲಿಲ್ಲ ಮತ್ತು ಅಗ್ನಿಪಥ್ ಯೋಜನೆಯು ಭಾರತೀಯ ಸೇನೆಯಲ್ಲಿ ಏಕೈಕ ಅತಿದೊಡ್ಡ ಮಾನವ ಸಂಪನ್ಮೂಲ ನಿರ್ವಹಣೆ ರೂಪಾಂತರವಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ನೇಮಕಾತಿಗೆ ಸಿದ್ಧತೆ ಆರಂಭಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಯುವಕರನ್ನು ಒತ್ತಾಯಿಸಿದ್ದಾರೆ. ಜೂನ್ 24 ರಂದು ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಭಾರತೀಯ ವಾಯುಪಡೆ ಈಗಾಗಲೇ ಪ್ರಕಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT