ದೇಶ

ಮೇಕೆದಾಟು ವಿವಾದ: ತಮಿಳುನಾಡು ಶಾಸಕಾಂಗ ಪಕ್ಷದ ನಾಯಕರಿಂದ ಶೀಘ್ರದಲ್ಲೇ ಕೇಂದ್ರ ಸಚಿವರ ಭೇಟಿ

Lingaraj Badiger

ಚೆನ್ನೈ: ಮೇಕೆದಾಟು ಅಣೆಕಟ್ಟು ವಿವಾದದ ಕುರಿತು ಕಾವೇರಿ ಪ್ರಾಧಿಕಾರವು ಜೂನ್ 23 ರಂದು ಚರ್ಚೆ ನಡೆಸಲಿದೆ ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯೂಎಂಎ)ದ ಅಧ್ಯಕ್ಷ ಎಸ್‌ಕೆ ಹಲ್ದಾರ್ ಅವರ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಜಲಸಂಪನ್ಮೂಲ ಸಚಿವ ದುರೈ ಮುರುಗನ್ ನೇತೃತ್ವದ ಶಾಸಕಾಂಗ ಪಕ್ಷದ ನಾಯಕರ ನಿಯೋಗವು ಶೀಘ್ರದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡಲಿದೆ ಎಂದು ಶನಿವಾರ ಹೇಳಿದ್ದಾರೆ.

ಹಲ್ದಾರ್ ಅವರ ಹೇಳಿಕೆಯಿಂದ ತಮಿಳುನಾಡಿನ ಜನರು ತೀವ್ರ ಅಸಮಾಧಾನಗೊಂಡಿದ್ದು, ಇದನ್ನು ತಿಳಿಸಲು  ತಮಿಳುನಾಡು ಶಾಸಕಾಂಗ ಪಕ್ಷದ ನಾಯಕರ ನಿಯೋಗ ಶೀಘ್ರದಲ್ಲೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ನಾವು ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಅಪಾಯಿಂಟ್‌ಮೆಂಟ್ ಕೇಳಿದ್ದೇವೆ. ಅವರು ಭೇಟಿ ಸಮಯ ನೀಡಿದ ನಂತರ ನಿಯೋಗ ದೆಹಲಿಗೆ ತೆರಳಲಿದೆ. ಮೇಕೆದಾಟು ನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಾವು ಬಿಡುವುದಿಲ್ಲ, ಸಿಡಬ್ಲ್ಯೂಎಂಎ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದು ಅನುಚಿತ. ಕಾವೇರಿ ನೀರಿನ ಮೇಲಿನ ರಾಜ್ಯದ ಹಕ್ಕನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ಸಿಎಂ ಸ್ಟಾಲಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಂದೆ ಪ್ರಕರಣ ಬಾಕಿ ಇರುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅಧಿಕಾರವನ್ನು ಸಿಡಬ್ಲ್ಯೂಎಂಎ ಹೊಂದಿದೆಯೇ? ಕಾನೂನು ಗೊತ್ತಿದ್ದರೂ, ಮೇಕೆದಾಟು ಸಮಸ್ಯೆಯನ್ನು ಪ್ರಾಧಿಕಾರವು ಚರ್ಚಿಸುತ್ತದೆ ಎಂದು ಸಿಡಬ್ಲ್ಯೂಎಂಎ ಅಧ್ಯಕ್ಷರು ಹೇಳಿರುವುದು ಕಾನೂನು ಬಾಹಿರ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.

SCROLL FOR NEXT