ದೇಶ

ಅಗ್ನಿಪಥ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ: ಕಾಂಗ್ರೆಸ್ ನಿಯೋಗದಿಂದ ರಾಷ್ಟ್ರಪತಿ ಭೇಟಿ

Lingaraj Badiger

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ನಾಲ್ಕನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ರಾಹುಲ್ ಗಾಂಧಿಯವರ ಮೊದಲ ಮೂರು ಸುತ್ತಿನ ವಿಚಾರಣೆ ವೇಳೆ ಕಾಂಗ್ರೆಸ್ ಇಡಿ ವಿಚಾರಣೆ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಿತು. ಪಕ್ಷದ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಕಾಂಗ್ರೆಸ್ ಪಕ್ಷ ಈಗ ತನ್ನ ಪ್ರತಿಭಟನಾ ತಂತ್ರವನ್ನು ಬದಲಾಯಿಸಲು ನಿರ್ಧರಿಸಿದೆ.

ಕಾಂಗ್ರೆಸ್ ನಾಯಕರು ಈಗ ದೆಹಲಿಯ ನಿಯೋಜಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರೋಧಿಸಿ ನಿನ್ನೆ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ತಿಭಟನೆ ನಡೆಸಿದ್ದು, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಜತೆಗೆ ಇಂದು ದೇಶಾದ್ಯಂತ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಯುವಕರ ವಿರೋಧಿ ಅಗ್ನಿಪಥ ಯೋಜನೆ ವಿರುದ್ಧ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನ ಇಡಿ ವಿಚಾರಣೆ ನಡೆಸುತ್ತಿರುವುದನ್ನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಮುಂದುವರೆಸಲಿದೆ. ಅಲ್ಲದೆ ಕಾಂಗ್ರೆಸ್ ನಿಯೋಗವು ಇಂದು ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದೆ.

ರಾಷ್ಟ್ರಪತಿ ಭೇಟಿ ವೇಳೆ ಪಕ್ಷದ ಪ್ರಧಾನ ಕಚೇರಿಗೆ ಪೊಲೀಸ್ ಸಿಬ್ಬಂದಿಯ ಪ್ರವೇಶ ಕುರಿತು ಕಾಂಗ್ರೆಸ್ ನಾಯಕರು ಪತ್ರವನ್ನು ಸಲ್ಲಿಸಲಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ ಎಂದು ಪಕ್ಷದ ನಾಯಕ ಅಜಯ್ ಮಾಕನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಮ್ಮ ಪ್ರತಿಭಟನೆಯ ವೇಳೆ ಪಕ್ಷದ ಸಂಸದರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ನುಗ್ಗಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ದೆಹಲಿ ಪೊಲೀಸರ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ.

SCROLL FOR NEXT