ದೇಶ

ಮಹಾ ರಾಜಕೀಯ ಬಿಕ್ಕಟ್ಟು: ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆ ವಜಾ

Lingaraj Badiger

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರ್ಚಿ ಅಲುಗಾಡುತ್ತಿದ್ದು, ಪಕ್ಷದ ಕೆಲ ಶಾಸಕರೊಂದಿಗೆ ನಾಪತ್ತೆಯಾಗಿರೋ ಶಿವಸೇನೆ ಸಚಿವ ಏಕನಾಥ್ ಶಿಂಧೆ ಅವರಿಗೆ ಪಕ್ಷ ವಜಾ ಶಿಕ್ಷೆ ನೀಡಿದೆ.  ಏಕನಾಥ್ ಶಿಂಧೆ ಅವರು ಇತರ 21 ಶಾಸಕರೊಂದಿಗೆ ಗುಜರಾತ್‌ನ ಸೂರತ್ ಹೋಟೆಲ್‌ಗೆ ತೆರಳಿದ್ದಾರೆ ಎಂದು ವರದಿಯಾದ ನಂತರ ಶಿವಸೇನೆ ಮಂಗಳವಾರ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಮತ್ತು ಮುಖ್ಯ ಸಚೇತಕ ಸ್ಥಾನದಿಂದ ಶಿಂಧೆ ಅವರನ್ನು ವಜಾಗೊಳಿಸಿದೆ.

ಅದೇ ಸಮಯದಲ್ಲಿ ಏಕನಾಥ್ ಶಿಂಧೆ ಅವರು ತಾವು ಅಧಿಕಾರಕ್ಕಾಗಿ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಬಾಳಾಸಾಹೇಬರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ. ಬಾಳಾಸಾಹೇಬರ ಚಿಂತನೆಗಳು ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಬೋಧನೆಗಳಿಗೆ ಸಂಬಂಧಿಸಿದಂತೆ ನಾವು ಎಂದಿಗೂ ಅಧಿಕಾರಕ್ಕಾಗಿ ಮೋಸ ಮಾಡಿಲ್ಲ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರಾಗಿದ್ದ ಏಕನಾಥ್ ಶಿಂಧೆ ಅವರ ಸ್ಥಾನಕ್ಕೆ ಶಿವಸೇನೆಯ ಸೆವ್ರಿ ಶಾಸಕ ಅಜಯ್ ಚೌಧರಿ ಅವರನ್ನು ನೂತನವಾಗಿ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಅನ್ನು ಒಳಗೊಂಡಿರುವ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಕೂಟವು ಹಿನ್ನಡೆ ಅನುಭವಿಸಿದ ಒಂದು ದಿನದ ನಂತರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಸ್ಪರ್ಧಿಸಿದ್ದ ಐದೂ ವಿಧಾನ ಪರಿಷತ್ ಸ್ಥಾನದಲ್ಲಿ ಬಿಜೆಪಿ ವಿಜಯ ಸಾಧಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿಯೊಬ್ಬರಿಗೆ ಸೋಲಾಗಿದೆ. ಚುನಾವಣೆಯಲ್ಲಿ ಆಡಳಿತಾರೂಢ ಶಾಸಕರು ಅಡ್ಡ ಮತದಾನ ಮಾಡಿದ್ದಾರೆಂದು ಗೊತ್ತಾಗ್ತಿದ್ದಂತೆ ಮತ್ತೊಂದು ಒಡಕು ಶುರುವಾಗಿದೆ.

SCROLL FOR NEXT