ದೇಶ

'ಮಹಾ' ರಾಜಕೀಯ ಬಿಕ್ಕಟ್ಟು: 46 ಶಾಸಕರ ಬೆಂಬಲವಿದೆ ಎಂದ ಏಕನಾಥ್ ಶಿಂಧೆ, ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ ಶಿವಸೇನೆ

Vishwanath S

ಮುಂಬೈ: ಜೂನ್ 21ರಂದು ಭುಗಿಲೆದ್ದ ಮಹಾರಾಷ್ಟ್ರ ರಾಜಕೀಯ ನಾಟಕದ ಕೇಂದ್ರಬಿಂದು ಈಗ ಗುವಾಹಟಿಗೆ ಸ್ಥಳಾಂತರಗೊಂಡಿದೆ. ಶಿವಸೇನೆಯ ಪ್ರಬಲ ವ್ಯಕ್ತಿ, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಮೊದಲಿಗೆ ತಂಗಿದ್ದ ಸೂರತ್‌ನ ಲೆ ಮೆರಿಡಿಯನ್ ಹೋಟೆಲ್‌ನಿಂದ ಮಧ್ಯರಾತ್ರಿ ಗುವಾಹಟಿಗೆ ಬಂಡಾಯ ಶಾಸಕರೊಂದಿಗೆ ತೆರಳಿದ್ದಾರೆ.

40 ಶಾಸಕರು ತಮ್ಮ ತೆಕ್ಕೆಯಲ್ಲಿ ಇದ್ದಾರೆ ಎಂದು ಹೇಳಿಕೊಳ್ಳುತ್ತಿರುವ ಶಿಂಧೆ ಅವರು ತಾವು ಶಿವಸೈನಿಕರಾಗೇ ಉಳಿದುಕೊಂಡು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬೇಕು ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ.

ಇದರ ಮಧ್ಯೆ ಶಿವಸೇನೆ ತನ್ನ ಪಕ್ಷದ ಶಾಸಕರಿಗೆ ಸೂಕ್ತ ಕಾರಣ ಮತ್ತು ಪೂರ್ವ ಮಾಹಿತಿ ಇಲ್ಲದೆ ಯಾರಾದರೂ ಇಂದು ನಡೆಯಲಿರುವ ಮಹತ್ವದ ಸಭೆಗೆ ಗೈರು ಹಾಜರಾದರೆ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಅವರ ಸದಸ್ಯತ್ವ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಮುಖ್ಯ ಸಚೇತಕರು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇಂದು ಸಂಜೆ ನಡೆಯಲಿರುವ ಮಹತ್ವದ ಸಭೆಗೆ ಹಾಜರಾಗುವಂತೆ ಶಿವಸೇನೆಯ ಮುಖ್ಯ ಸಚೇತಕರು ಪಕ್ಷದ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದಾರೆ. ಯಾರಾದರೂ ಗೈರು ಹಾಜರಾದರೆ, ಶಾಸಕರು ಸ್ವಯಂಪ್ರೇರಿತರಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ 7 ಸಚಿವರು ಗೈರು ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

SCROLL FOR NEXT