ದೇಶ

ನಾಪತ್ತೆಯಾಗಿದ್ದ ಇಬ್ಬರು ಶಿವಸೇನಾ ಶಾಸಕರು ವಾಪಸ್; ಬಲವಂತವಾಗಿ ಇಂಜೆಕ್ಷನ್ ನೀಡಿದ್ದಾರೆಂದ ಬಂಡಾಯಗಾರರು

Lingaraj Badiger

ಮುಂಬೈ: ಮಹಾರಾಷ್ಟ್ರದ ರಾಜಕೀಯ ಬಿರುಗಾಳಿಯ ಮಧ್ಯೆ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದ್ದು,  ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಸೇರಿಕೊಂಡಿದ್ದಾರೆ ಎಂದು ಈ ಹಿಂದೆ ಊಹಿಸಲಾಗಿದ್ದ ಶಿವಸೇನೆಯ ಇಬ್ಬರು ಶಾಸಕರಾದ ನಿತಿನ್ ದೇಶಮುಖ್ ಮತ್ತು ಕೈಲಾಶ್ ಪಾಟೀಲ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಅಪಹರಿಸಲಾಗಿತ್ತು. ಗುಜರಾತ್‌ನ ಸೂರತ್‌ಗೆ ಕರೆದೊಯ್ಯಲಾಗಿತ್ತು, ಅಲ್ಲಿಂದ ತಪ್ಪಿಸಿಕೊಂಡು ಲಾರಿ ಹತ್ತಿಕೊಂಡು ಬಂದಿದ್ದೇವೆ ಎಂದಿದ್ದಾರೆ.

ನಾನು ತಪ್ಪಿಸಿಕೊಂಡು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದೆ. ದಾರಿಹೋಕರ ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದಾಗ ನೂರಕ್ಕೂ ಹೆಚ್ಚು ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅವರು ನನಗೆ ಹೃದಯಾಘಾತವಾಗಿದೆ ಎಂದು ಹೇಳಿ ನನ್ನ ದೇಹದ ಮೇಲೆ ಕೆಲವು ವೈದ್ಯಕೀಯ ಕಾರ್ಯವಿಧಾನಗಳನ್ನು ಮಾಡಲು ಪ್ರಯತ್ನಿಸಿದರು. ನನಗೆ ಯಾವುದೇ ಹಠಾತ್ ಆರೋಗ್ಯ ತೊಂದರೆಗಳನ್ನು ಕಾಣಿಸಿಕೊಂಡಿರಲ್ಲಿಲ್ಲ. ಆದರೆ ಬಲವಂತವಾಗಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ನಿತಿನ್ ದೇಶಮುಖ್ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಬಲವಂತವಾಗಿ ಕೆಲವು ಇಂಜೆಕ್ಷನ್ ನೀಡಲಾಯಿತು ಎಂದು ನಿತಿನ್ ದೇಶಮುಖ್ ತಿಳಿಸಿದ್ದಾರೆ. ನಾನು ಕಟ್ಟಾ ಶಿವಸೇನಾ ಕಾರ್ಯಕರ್ತ. ಉದ್ಧವ್ ಠಾಕ್ರೆ ಅವರೊಂದಿಗೆ ಸಹಜವಾಗಿಯೇ ಇದ್ದೇನೆ ಎಂದು ವರದಿಗಾರರು ತಮ್ಮ ನಿಷ್ಠೆಯ ಬಗ್ಗೆ ಕೇಳಿದಾಗ ಉತ್ತರಿಸಿದರು.

ನಿತಿನ್ ದೇಶಮುಖ್ ಅವರ ಪತ್ನಿ ನಿನ್ನೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ನಾಪತ್ತೆಯಾಗಿದ್ದಾರೆಂದು ದೂರು ದಾಖಲಿಸಿದ್ದರು.  ಅವರಿಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದರು. ಶಾಸಕ ನಿತಿನ್ ದೇಶಮುಖ್ ಮಹಾರಾಷ್ಟ್ರದ ಬಾಲಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

SCROLL FOR NEXT