ದೇಶ

ಅಸ್ಸಾಂ ಪ್ರವಾಹ: ಕಳೆದ 24 ಗಂಟೆಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ 12 ಜನರ ಸಾವು, ಸಿಎಂ ಬಿಸ್ವಾ ಶರ್ಮಾ ವೈಮಾನಿಕ ಸಮೀಕ್ಷೆ

Nagaraja AB

ದಿಸ್ಪುರ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು, ಕಳೆದ 24 ಗಂಟೆಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ವರ್ಷದ ಪ್ರವಾಹ ಮತ್ತು ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.

ಹೋಜೈ ಜಿಲ್ಲೆಯಲ್ಲಿ ನಾಲ್ಕು ಸಾವುಗಳು ವರದಿಯಾಗಿದ್ದರೆ ಕಾಮರೂಪದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬರ್ಪೇಟಾ ಮತ್ತು ನಲ್ಬರಿಯಲ್ಲಿ ತಲಾ ಮೂವರು ಸಾವಿಗೀಡಾಗಿದ್ದಾರೆ. 32 ಜಿಲ್ಲೆಗಳ 4, 941 ಗ್ರಾಮಗಳಲ್ಲಿ 54 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ.  

ಪ್ರವಾಹ ಪೀಡಿತ ಜಿಲ್ಲೆಯಲ್ಲಿ 2.71 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಒಟ್ಟು 845ಪರಿಹಾರ ಶಿಬಿರಗಳು ಮತ್ತು 1,025 ಪರಿಹಾರ ವಿತರಣಾ ಕೇಂದ್ರಗಳನ್ನು ಜಿಲ್ಲಾಡಳಿತ ಸ್ಥಾಪಿಸಿವೆ.  ಚಿರಾಂಗ್ ಜಿಲ್ಲೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.

ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಕ್ಯಾಚಾರ್, ಚಿರಾಂಗ್ ಸೇರಿದಂತೆ ಅನೇಕ ಜಿಲ್ಲೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ.ಈ ಮಧ್ಯೆ, ಸಿಎಂ ಹಿಮಾಂತ ಬಿಸ್ವಾ ಶರ್ಮಾ ಪ್ರವಾಹಪೀಡಿತ ಪ್ರದೇಶಗಳಲ್ಲಿ ಗುರುವಾರ ವೈಮಾನಿಕ ಸಮೀಕ್ಷೆ ನಡೆಸಿದರು.

SCROLL FOR NEXT