ದೇಶ

ಅಯೋಧ್ಯೆ ನದಿಯಲ್ಲಿ ಪತ್ನಿ ಜೊತೆ ಅಸಭ್ಯ ವರ್ತನೆ; ಪತಿಗೆ ಸಾರ್ವಜನಿಕರಿಂದ 'ಧರ್ಮದೇಟು'!

Srinivasamurthy VN

ಲಖನೌ: ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ವ್ಯಕ್ತಿ ಸಾರ್ವಜನಿಕರೇ ಸಾಮೂಹಿಕವಾಗಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ತನ್ನ ಪತ್ನಿಗೆ ಮುತ್ತು ಕೊಟ್ಟ ಎಂಬ ಕಾರಣಕ್ಕೆ ಪತಿಯನ್ನು ನೀರಿನಿಂದ ಹೊರಗೆಳೆದು ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಸ್ಥಳೀಯರೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಹೆಂಡತಿಗೆ ಮುತ್ತು ಕೊಟ್ಟ ಪತಿಯನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿ, ನದಿಯಿಂದ ಆತನನ್ನು ಎಳೆದೊಯ್ದು, ಸುತ್ತಮುತ್ತಲಿದ್ದ ಹಲವಾರು ಮಂದಿ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲ, ಅಯೋಧ್ಯೆಯಲ್ಲಿ ಇಂತಹ ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ವಿಡಿಯೋದಲ್ಲಿದೆ. ಪತಿಯನ್ನು ರಕ್ಷಿಸಲು ಪತ್ನಿ ಪ್ರಯತ್ನಿಸಿದರೂ ಕೂಡಾ ಜನರ ಗುಂಪು ಆತನನ್ನು ಎಳೆದೊಯ್ದು ಹಲ್ಲೆ ನಡೆಸಿದೆ. ಸರಯೂ ನದಿಯಲ್ಲಿದ್ದ ಪತಿ, ಪತ್ನಿಯನ್ನು ಜನರ ಗುಂಪು ಬಲವಂತದಿಂದ ಹೊರಗೆಳೆದು ಹಾಕಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅಯೋಧ್ಯೆ ಪೊಲೀಸರು ತಿಳಿಸಿದ್ದಾರೆ. ಸರಯೂ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದ್ದು, ಹಿಂದೂಗಳು ಇದನ್ನು ಪವಿತ್ರ ಅದೃಶ್ಯ ನದಿ ಎಂದು ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ಸ್ಥಳೀಯರು ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

SCROLL FOR NEXT