ದೇಶ

ಅಖಾಡಕ್ಕಿಳಿದ ರಾಜ್ಯಪಾಲ: ಶಿವಸೇನೆ ಬಂಡಾಯ ನಾಯಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಸೂಚನೆ!

Vishwanath S

ಮುಂಬೈ: ಶಿವಸೇನೆಯ ಬಂಡಾಯ ಶಾಸಕರಿಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

ಕೆಲವು ರಾಜಕೀಯ ನಾಯಕರು ಬೆದರಿಕೆಯ ಹೇಳಿಕೆಗಳನ್ನು ನೀಡಿದ ನಂತರ ಶಾಸಕರು ತಮ್ಮ ಮನೆ ಮತ್ತು ಕುಟುಂಬಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯಪಾಲರು, ಉನ್ನತ ಪೊಲೀಸ್ ಅಧಿಕಾರಿ ರಜನೀಶ್ ಸೇಠ್ ಅವರಿಗೆ ಪತ್ರ ಬರೆದಿದ್ದಾರೆ.

ಶಿವಸೇನಾ ಸಚಿವ ಏಕನಾಥ್ ಶಿಂಧೆ ತಮ್ಮದೇ ಪಕ್ಷದ ವಿರುದ್ಧ ಬಂಡಾಯವೆದ್ದು, ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿದ ನಂತರ ರಾಜ್ಯವು ದಿನದಿಂದ ದಿನಕ್ಕೆ ಬಿಕ್ಕಟ್ಟಿಗೆ ಸಾಕ್ಷಿಯಾಗುತ್ತಿರುವಂತೆಯೇ ಇದು ಮತ್ತೊಂದು ಬೆಳವಣಿಗೆ.

47 ಶಾಸಕರಲ್ಲಿ  ಶಿವಸೇನೆಯ 38, ಪ್ರಹರ್ ಜನ ಶಕ್ತಿ ಪಕ್ಷದ ಇಬ್ಬರು ಮತ್ತು ಏಳು ಸ್ವತಂತ್ರ ಶಾಸಕರ  ತಮ್ಮ ಕುಟುಂಬಗಳ ಪೊಲೀಸ್ ಭದ್ರತೆಯನ್ನು ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ಹಿಂಪಡೆಯಲಾಗಿದೆ ಎಂದು ತನಗೆ ತಿಳಿಸಿದ್ದಾರೆ ಎಂದು ರಾಜ್ಯಪಾಲರಾದ ಕೋಶ್ಯಾರಿ ಹೇಳಿದ್ದಾರೆ.

ಉದ್ಧವ್ ಠಾಕ್ರೆಗೆ ನಿಷ್ಠರಾಗಿರುವ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಕೆಲವು ಬಂಡಾಯ ಶಾಸಕರ ಕಚೇರಿಗಳನ್ನು ಧ್ವಂಸಗೊಳಿಸಿದ ಪ್ರತಿಭಟನೆಯ ನಂತರ 15 ಬಂಡಾಯ ಶಿವಸೇನೆ ಶಾಸಕರ ಭದ್ರತೆಯನ್ನು ಹೆಚ್ಚಿಸುವ ಕೇಂದ್ರ ಗೃಹ ಇಲಾಖೆ ನಿರ್ಧಾರವನ್ನು ಅನುಸರಿಸಿ ಪೊಲೀಸ್ ಭದ್ರತೆಯನ್ನು ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.

ಈ ವಾರದ ಆರಂಭದಲ್ಲಿ ಏಕನಾಥ್ ಶಿಂಧೆ ಅವರು ಸ್ವಂತ ಪಕ್ಷದ ವಿರುದ್ಧವೇ ಬಂಡಾಯವೆದ್ದು  ಗುಜರಾತ್‌ನ ಸೂರತ್‌ಗೆ ಮತ್ತು ನಂತರ ಅಸ್ಸಾಂಗೆ ಸ್ಥಳಾಂತರಗೊಂಡಾಗ ಅವರ ಪರ ಹಲವು ಶಿವಸೇನೆ ಶಾಸಕರು ನಿಂತಿದ್ದಾರೆ.

SCROLL FOR NEXT