ದೇಶ

ಅಸ್ಸಾಂ ಪ್ರವಾಹ ಪೀಡಿತರ ಪರಿಹಾರ ನಿಧಿಗೆ ಶಿವಸೇನೆ ಬಂಡಾಯ ಶಾಸಕರಿಂದ 51 ಲಕ್ಷ ರೂಪಾಯಿ ಧನಸಹಾಯ!

Sumana Upadhyaya

ಮುಂಬೈ: ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ಶಾಸಕರು ಕಳೆದ ವಾರದಿಂದ ಅಸ್ಸಾಂನ ಗುವಾಹಟಿಯ ಹೊಟೇಲ್ ನಲ್ಲಿ ಬೀಡುಬಿಟ್ಟಿದ್ದು, ಈ ಸಂದರ್ಭದಲ್ಲಿ ಅಸ್ಸಾಂ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವವರ ಪರಿಹಾರ ಕಾರ್ಯಕ್ಕಾಗಿ 51 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

ಮಹಾ ವಿಕಾಸ್ ಅಘಾಡಿ ಸರ್ಕಾರದ ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ತಮ್ಮ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು ಮೈತ್ರಿ ಸರ್ಕಾರ ಬಿದ್ದು ಹೋಗುವ ಹಂತಕ್ಕೆ ತಲುಪಿದೆ. ಈ ಶಾಸಕರು ಜೂನ್ 22 ರಂದು ಗುವಾಹಟಿಗೆ ಬಂದಿದ್ದರು. ಗುಜರಾತ್‌ನ ಸೂರತ್‌ನಿಂದ ಹಲವಾರು ತಂಡಗಳಲ್ಲಿ ಚಾರ್ಟರ್ಡ್ ವಿಮಾನಗಳಲ್ಲಿ ಬಂದಿದ್ದರು. 

ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸುತ್ತಿರುವಾಗಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳ ನಡುವೆ ಬಂಡಾಯ ಶಾಸಕರು ಪ್ರವಾಹಪೀಡಿತರಿಗೆ ಸಹಾಯಹಸ್ತ ಚಾಚುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಲು ಹೊರಟಿದ್ದಾರೆ.

ಬಂಡಾಯ ಶಾಸಕರ ಪರವಾರಿ ವಕ್ತಾರ ದೀಪಕ್ ಕೇಸರ್ಕರ್ ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿ, ಶಿಂಧೆ ಅವರು ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 51 ಲಕ್ಷ ರೂಪಾಯಿ ನೀಡಿದ್ದಾರೆ. ಅಸ್ಸಾಂ ಜನತೆಯ ಸಂಕಷ್ಟಕ್ಕೆ ಈ ಕ್ಷಣ ನಾವು ಜೊತೆಯಾಗುತ್ತೇವೆ ಎಂದರು. 

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಬಿ ಎಸ್ ಕೊಶ್ಯಾರಿ ಸೂಚಿಸಿದ್ದಾರೆ. ಬಂಡಾಯ ಶಾಸಕರು ಗುವಾಹಟಿಯಿಂದ ನಾಳೆ ಮುಂಬೈಗೆ ಹೋಗಲು ನಿರ್ಧರಿಸಿದ್ದಾರೆ. ಸದ್ಯ ಶಿಂಧೆ ಅವರ ಆಪ್ತರು ಗೋವಾ ಮೂಲದ ಹೋಟೆಲ್‌ನಲ್ಲಿ ತಂಗಿದ್ದು, ನಾಳೆ ಬೆಳಗ್ಗೆ 9.30 ಕ್ಕೆ ಮುಂಬೈ ತಲುಪಲಿದ್ದಾರೆ.

ನಾವು ಮುಂಬೈನಿಂದ ಒಂದು ಗಂಟೆ ವಾಯುದೂರದಲ್ಲಿರುವ ಸ್ಥಳದಲ್ಲಿ ತಂಗುತ್ತೇವೆ, ಇದರಿಂದ ನಾವು ನಾಳೆ ಸದನ ಪರೀಕ್ಷೆ ಸಮಯದಲ್ಲಿ ಮುಂಬೈಗೆ ತಲುಪಬಹುದು ಎಂದು ಕೇಸರ್ಕರ್ ಹೇಳಿದ್ದಾರೆ.

SCROLL FOR NEXT