ದೇಶ

ಮೊರ್ಬಿ ಸೇತುವೆ ಕುಸಿತ 'ದೇವರ ಇಚ್ಛೆ' ಎಂದ ಒರೆವಾ ಅಧಿಕಾರಿ: 4 ಆರೋಪಿಗಳು ಪೊಲೀಸ್ ವಶಕ್ಕೆ

Lingaraj Badiger

ಮೊರ್ಬಿ: 141 ಮಂದಿಯನ್ನು ಬಲಿ ಪಡೆದ ಗುಜರಾತ್ ನ ಮೊಬ್ರಿ ಸೇತುವೆ ಕುಸಿತ 'ದೇವರ ಇಚ್ಛೆ' ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರಾದ, ಸೇತುವೆ ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿ ಹೇಳಿದ್ದಾರೆ.

ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಕಂಪನಿಯ ಒಂಬತ್ತು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಇಂದು ನ್ಯಾಯಾಲಕ್ಕೆ ಹಾಜರುಪಡಿಸಿದರು. ವಿಚಾರಣೆ ವೇಳೆ ಆರೋಪಿಯೊಬ್ಬರು ಈ ಘಟನೆ ನಡೆದಿರುವುದು "ದೇವರ ಇಚ್ಛೆ" ಎಂದು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

150 ವರ್ಷಗಳಷ್ಟು ಹಳೆಯದಾದ ಸೇತುವೆಯ ನಿರ್ವಹಣೆಯ ಹೊಣೆ ಹೊತ್ತಿರುವ ಒರೆವಾ ಕಂಪನಿಯ ಮ್ಯಾನೇಜರ್ ದೀಪಕ್ ಪರೇಖ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೇತುವೆ ಕುಸಿತದ ನಂತರ ಬಂಧಿಸಲಾದ ಒಂಬತ್ತು ಜನರಲ್ಲಿ ಅವರು ಒಬ್ಬರು.

"ಭಗವಾನ್ ಕಿ ಇಚ್ಚಾ (ದೇವರ ಇಚ್ಛೆ), ಇಂತಹ ದುರದೃಷ್ಟಕರ ಘಟನೆ ಸಂಭವಿಸಿದೆ" ಎಂದು ಅವರು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂಜೆ ಖಾನ್ ಅವರಿಗೆ ತಿಳಿಸಿದರು.

ಅಕ್ಟೋಬರ್ 26 ರಂದು ಸರ್ಕಾರದ ಅನುಮೋದನೆ ಅಥವಾ ಗುಣಮಟ್ಟ ಪರೀಕ್ಷೆ ಇಲ್ಲದೆ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು.

ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನು ಪೊಲೀಸ್ ವಶಕ್ಕೆ ನೀಡಿದೆ ಮತ್ತು ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

SCROLL FOR NEXT