ದೇಶ

ಇತ್ತೀಚೆಗೆ ಬಂಡಾಯವೆದ್ದಿದ್ದ ರಾಜಸ್ಥಾನದ ಶಾಸಕರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ: ಸಚಿನ್ ಪೈಲಟ್

Ramyashree GN

ಜೈಪುರ: ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಸೆಪ್ಟೆಂಬರ್‌ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿರುವ ಪಕ್ಷದ ನಾಯಕ ಸಚಿನ್ ಪೈಲಟ್, ಅಶಿಸ್ತಿನ ಕಾರಣಕ್ಕಾಗಿ ಎಐಸಿಸಿಯಿಂದ ನೋಟಿಸ್ ಪಡೆದವರ ವಿರುದ್ಧ ಪಕ್ಷವು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಸಲಹೆ ನೀಡಿದ್ದಾರೆ.

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 13 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಪಕ್ಷದ ನಿಯಮಗಳು ಮತ್ತು ಶಿಸ್ತು ಎಲ್ಲರಿಗೂ ಅನ್ವಯಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಷಯದಲ್ಲಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

'ಅಜಯ್ ಮಾಕೆನ್ ಮತ್ತು ಖರ್ಗೆ (ವೀಕ್ಷಕರು) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದು ಅಶಿಸ್ತಿನ ಪ್ರಕರಣ ಎಂದು ಎಐಸಿಸಿ ಗಮನಿಸಿದೆ. ಪಕ್ಷವು ಮೂವರಿಗೆ ನೋಟಿಸ್ ಕಳುಹಿಸಿದೆ ಮತ್ತು ಅವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಕಾಂಗ್ರೆಸ್ ಎಲ್ಲರಿಗೂ ಒಂದೇ ರೀತಿಯ ನಿಯಮಗಳನ್ನು ಹೊಂದಿರುವ ಹಳೆಯ ಪಕ್ಷ. ಹೀಗಾಗಿ ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಬಣದ ಶಾಸಕರು ಸೆಪ್ಟೆಂಬರ್ 25 ರಂದು ನಡೆದ ಸಿಎಲ್‌ಪಿ ಸಭೆಯನ್ನು ಧಿಕ್ಕರಿಸಿ ಪಕ್ಷದ ನೀತಿಗೆ ವಿರುದ್ಧವಾಗಿ ಧರಿವಾಲ್ ಅವರ ನಿವಾಸದಲ್ಲಿ ಸಮಾನಾಂತರ ಸಭೆ ನಡೆಸಿದ ನಂತರ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್, ಮುಖ್ಯ ಸಚೇತಕ, ಪಿಎಚ್‌ಇಡಿ ಸಚಿವ ಮಹೇಶ್ ಜೋಶಿ ಮತ್ತು ಆರ್‌ಟಿಡಿಸಿ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರಿಗೆ ನೋಟಿಸ್ ನೀಡಲಾಗಿದೆ.

ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸಚಿನ್ ಪೈಲಟ್ ಅವರನ್ನು ಹೊಸ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದನ್ನು ಗೆಹ್ಲೋಟ್ ಬಣದ ಶಾಸಕರು ವಿರೋಧಿಸಿದ್ದರು.

ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಹೊಗಳಿದ್ದಾರೆ. ಈ ಹಿಂದೆ ಗುಲಾಂ ನಬಿ ಆಜಾದ್ ಅವರನ್ನು ಕೂಡ ಸಂಸತ್ತಿನಲ್ಲಿ ಹೊಳಗಿದ್ದರು. ಅದು ಮುಂದೆ ಏನಾಯ್ತು ಎಂಬುದನ್ನು ನಾವು ನೋಡಿದ್ದೇವೆ. ಹೀಗಾಗಿ ಇದು ಕುತೂಹಲಕಾರಿಯಾಗಿದ್ದು, ಲಘುವಾಗಿ ಪರಿಗಣಿಸಬಾರದು ಎಂದು ಪೈಲಟ್ ಹೇಳಿದ್ದಾರೆ.

SCROLL FOR NEXT