ದೇಶ

ಗುಜರಾತ್ ವಿಧಾನಸಭೆ ಚುನಾವಣೆ: ಮಾಜಿ ಪತ್ರಕರ್ತ ಈಸುದನ್ ಗಧ್ವಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ

Lingaraj Badiger

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಗೆ ಸಡ್ಡು ಹೊಡೆದಿರುವ ಆಮ್ ಆದ್ಮಿ ಪಕ್ಷ(ಎಎಪಿ) ಶುಕ್ರವಾರ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು, ಆಪ್ ಅಧಿಕಾರಕ್ಕೆ ಬಂದರೆ ಮಾಜಿ ಪತ್ರಕರ್ತ ಈಸುದನ್ ಗಧ್ವಿ ಅವರು ಗುಜರಾತ್ ಸಿಎಂ ಆಗಲಿದ್ದಾರೆ ಎಂದು ಹೇಳಿದೆ.

ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಚುನಾವಣೆಯಲ್ಲಿ ಈಸುದನ್ ಗಧ್ವಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ಈ ಸಂಬಂಧ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ 40 ವರ್ಷದ ಗಧ್ವಿ ಅವರು ಶೇಕಡಾ 73 ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.

ಗುಜರಾತ್ ಜನರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಫೋನ್ ಸಂಖ್ಯೆಗೆ ಕರೆ ಮಾಡಿ ಮತ್ತು ರೆಕಾರ್ಡ್ ಮಾಡಿದ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪಾಟಿದಾರ್ ಸಮುದಾಯದ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ವಿರುದ್ಧ ಗಧ್ವಿ ಕಣಕ್ಕಿಳಿದಿದ್ದರು.

ಗಧ್ವಿ ಅವರು ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿ ತಂಡದ ಸದಸ್ಯರಾಗಿದ್ದಾರೆ.

ಪ್ರಸಿದ್ಧ ಟಿವಿ ಪತ್ರಕರ್ತ ಗಧ್ವಿ ಅವರು ವಿಟಿವಿ ನ್ಯೂಸ್‌ನ ಮಾಜಿ ಸಂಪಾದಕರಾಗಿದ್ದು, ಚಾನೆಲ್‌ನ ಜನಪ್ರಿಯ ಸುದ್ದಿ ಕಾರ್ಯಕ್ರಮ ಮಹಾಮಂತನ್‌ ನಿರೂಪಕರಾಗಿದ್ದರು.

ಗಧ್ವಿ ಅವರು ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದ ರೈತ ಕುಟುಂಬದಿಂದ ಬಂದವರಾಗಿದ್ದು, ರಾಜ್ಯದ ಜನಸಂಖ್ಯೆಯ ಶೇಕಡಾ 48 ರಷ್ಟಿರುವ ಇತರ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಘೋಷಿಸಿದೆ.

SCROLL FOR NEXT