ದೇಶ

ವಿಶ್ವದಲ್ಲೇ ಮೊದಲ ಪ್ರಕರಣ: 21 ದಿನಗಳ ನವಜಾತ ಶಿಶುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆ!

Manjula VN

ರಾಂಚಿ: ಇದು ವಿಶ್ವದಲ್ಲಿಯೇ ಮೊದಲ ಪ್ರಕರಣವಾಗಿದ್ದು, 21 ದಿನದ ನವಜಾತ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣಗಳು ಪತ್ತೆಯಾಗಿರುವ ಘಟನೆ ಜಾರ್ಖಂಡ್ ನ ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ನವಜಾತ ಹೆಣ್ಣುಮಗು ಅಕ್ಟೋಬರ್ 10, 2022 ರಂದು ರಾಮಗಢದಲ್ಲಿ ಜನಿಸಿತ್ತು. ಮಗುವಿನ ಆರೋಗ್ಯ ಹದಗೆಟ್ಟಾಗ, ರಾಮಗಢದ ಆಸ್ಪತ್ರೆಗೆ ದಾಖಲಿಸಿ, ಸಿಟಿ ಸ್ಕ್ಯಾನ್ ಮಾಡಲಾಯಿತು. ಸಿಟಿ ಸ್ಕ್ಯಾನ್ ವರದಿ ನೋಡಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ಭಾವಿಸಿದ್ದರು. ಆದರೆ, ನಂತರ ಹೊಟ್ಟೆನೋವು ಕಾಣಿಸಿಕೊಂಡ ತಕ್ಷಣ ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆ ರಾಂಚಿಗೆ ಕರೆತರಲಾಯಿತು.

ನವಜಾತ ಶಿಶುವಿಗೆ ನವೆಂಬರ್ 1 ರಂದು ರಾಂಚಿ ಖಾಸಗಿ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯಡಿ ಹೊಟ್ಟೆ ನೋವಿನ ಮೇಲೆ ಶಸ್ತ್ರಚಿಕಿತ್ಸೆ ನಡೆಯಿತು. ಈ ವೇಳೆ ಮಗುವಿನ ಅನ್ನನಾಳದ ಗಡ್ಡೆಗೆ ಸಂಬಂಧಿಸಿದ ಎಂಟು ಭ್ರೂಣಗಳಿರುವುದು ಖಚಿತವಾಯಿತು. ಕೂಡಲೇ ಆಘಾತಕ್ಕೊಳಗಾದ ವೈದ್ಯರು ಈ ಎಂಟು ಭ್ರೂಣಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು.

ಭ್ರೂಣಗಳ ಗಾತ್ರವು ಮೂರು ಸೆಂಟಿಮೀಟರ್‌ಗಳಿಂದ ಐದು ಸೆಂಟಿಮೀಟರ್‌ಗಳವರೆಗೆ ಇದ್ದವು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ ಎಂಡಿ ಇಮ್ರಾನ್ ತಿಳಿಸಿದ್ದಾರೆ.

ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಫೆಟಸ್-ಇನ್-ಫೀಟು (ಎಫ್‌ಐಎಫ್) ಎಂದು ಕರೆಯಲಾಗುತ್ತದೆ, ಇದು ಅಪರೂಪದ ಪ್ರಕರಣವಾಗಿದ್ದು, ಇದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಜರ್ನಲ್ ಹೇಳಿದೆ.

"ಇದುವರೆಗೆ ಲಭ್ಯವಿರುವ ದಾಖಲೆಗಳ ಪ್ರಕಾರ, ಹೆಚ್ಚಿನ ಎಫ್‌ಐಎಫ್ ಪ್ರಕರಣಗಳಲ್ಲಿ ಒಂದು ಭ್ರೂಣವು ವರದಿಯಾಗಿದೆ. ಎಂಟು ಭ್ರೂಣಗಳ ಪ್ರಕರಣವು ಎಲ್ಲಿಯೂ ವರದಿಯಾಗಿರಲಿಲ್ಲ" ಎಂದು ಡಾ ಇಮ್ರಾನ್ ಹೇಳಿದ್ದಾರೆ.

ಎಫ್ಐಎಫ್ ಬಹಳ ಅಪರೂಪ ಮತ್ತು ಇದು ಐದು ಲಕ್ಷ ಜನನಗಳಲ್ಲಿ ಒಂದು ಮಗುವಿನಲ್ಲಿ ಸಂಭವಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮಗುವಿಗೆ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಮಗುವಿನ ಆರೋಗ್ಯ ಸ್ಥಿರವಾಗಿದೆ. ಮಗುವನ್ನು ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದ್ದು, ಒಂದು ವಾರದಲ್ಲಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದು ಅಪರೂಪದ ಪ್ರಕರಣವಾದ್ದರಿಂದ, ಇದನ್ನು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಲು ಸಿದ್ಧತೆ ನಡೆಸಿದ್ದೇವೆಂದು ರಾಂಚಿಯ ರಾಣಿ ಆಸ್ಪತ್ರೆಯ ಮುಖ್ಯಸ್ಥ ರಾಜೇಶ್ ಸಿಂಗ್ ಅವರು ತಿಳಿಸಿದ್ದಾರೆ.

SCROLL FOR NEXT