ದೇಶ

ಮೊರ್ಬಿ ದುರಂತದ ನಂತರ ಸರ್ಕಾರದ ಪರವಾಗಿ ಯಾರೂ ರಾಜೀನಾಮೆ ನೀಡಿಲ್ಲ ಅಥವಾ ಕ್ಷಮೆ ಕೇಳಿಲ್ಲ: ಚಿದಂಬರಂ

Lingaraj Badiger

ಅಹಮದಾಬಾದ್: ಗುಜರಾತ್‌ನಲ್ಲಿ 141 ಮಂದಿ ಬಲಿ ಪಡೆದ ಮೊರ್ಬಿ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರು, ದುರಂತದ ನಂತರ ಸರ್ಕಾರದ ಪರವಾಗಿ ಯಾರೂ ರಾಜೀನಾಮೆ ನೀಡಿಲ್ಲ ಅಥವಾ ಕ್ಷಮೆಯನ್ನೂ ಕೇಳಿಲ್ಲ ಎಂದರು.

ಇಂದು ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿದಂಬರಂ, ಗುಜರಾತನ್ನು ದೆಹಲಿಯಿಂದ ಆಳಲಾಗುತ್ತಿದೆಯೇ ಹೊರತು ಇಲ್ಲಿನ ಮುಖ್ಯಮಂತ್ರಿಯಿಂದಲ್ಲ ಎಂದರು.

"ಮೊರ್ಬಿ ಸೇತುವೆ ಕುಸಿತ ಗುಜರಾತ್‌ ಹೆಸರಿಗೆ ಧಕ್ಕೆ ತಂದಿದೆ... ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು, ದುರಂತದ ಬಗ್ಗೆ ಸರ್ಕಾರದ ಪರವಾಗಿ ಯಾರೂ ಕ್ಷಮೆ ಯಾಚಿಸಿಲ್ಲ ಅಥವಾ ಘಟನೆಯ ಹೊಣೆ ಹೊತ್ತು ಯಾರೂ ರಾಜೀನಾಮೆ ನೀಡಿಲ್ಲ ಎಂದರು.

"ಗುಜರಾತ್ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ಹೈಕೋರ್ಟ್ ಈ ಎಲ್ಲಾ ಪ್ರಶ್ನೆಗಳನ್ನು ಮತ್ತು ಇತರ ಪ್ರಶ್ನೆಗಳನ್ನು ಎತ್ತುತ್ತದೆ ಮತ್ತು ಉತ್ತರಗಳನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಚಿದಂಬರಂ ಹೇಳಿದರು.

ಗುಜರಾತ್‌ ನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಪಿ. ಚಿದಂಬರಂ ಅವರು, "ಬಿಜೆಪಿ ಸರ್ಕಾರವು 1998 ರಿಂದ ನಿರಂತರವಾಗಿ ಅಧಿಕಾರದಲ್ಲಿದೆ. ಕಳೆದ ಆರು ವರ್ಷಗಳಲ್ಲಿ ಗುಜರಾತ್ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. 2023ರ ಚುನಾವಣೆ ನಂತರ ಭೂಪೇಂದ್ರ ಪಟೇಲ್‌ಗೂ ಬಾಗಿಲು ತೋರಿಸುವ ಸಾಧ್ಯತೆ ಇದೆ ಎಂದರು.

SCROLL FOR NEXT