ದೇಶ

ಅಜಂ ಖಾನ್ ಅನರ್ಹತೆ: ನವೆಂಬರ್ 10ರ ವರೆಗೆ ಉಪಚುನಾವಣೆ ಘೋಷಿಸದಂತೆ ಇಸಿಗೆ 'ಸುಪ್ರೀಂ' ಸೂಚನೆ

Lingaraj Badiger

ನವದೆಹಲಿ: ದ್ವೇಷ ಭಾಷಣ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್‌ ಅವರನ್ನು ಅನರ್ಹಗೊಳಿಸಿದ ನಂತರ ತೆರವಾಗಿದ್ದ ಉತ್ತರ ಪ್ರದೇಶದ ರಾಂಪುರ ಸದರ್‌ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್‌ 10ರವರೆಗೆ ಉಪ ಚುನಾವಣೆ ಅಧಿಸೂಚನೆ ಹೊರಡಿಸದಂತೆ ಸುಪ್ರೀಂ ಕೋರ್ಟ್‌ ಬುಧವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ, ತಮ್ಮ ಶಿಕ್ಷೆಗೆ ತಡೆಯಾಜ್ಞೆ ಕೋರಿ ಖಾನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರವೇ ನಡೆಸಿ ತೀರ್ಪು ನೀಡುವಂತೆ ವಿಶೇಷ ಸೆಷನ್ಸ್ ನ್ಯಾಯಾಲಯಕ್ಕೆ ಸೂಚಿಸಿದೆ.

ಖಾನ್ ಅವರ ಅರ್ಜಿ ವಿಚಾರಣೆ ನಡೆಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದ ನಂತರ ಚುನಾವಣಾ ಆಯೋಗ ನವೆಂಬರ್ 11 ಅಥವಾ ನಂತರ ಉಪಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಕ್ಟೋಬರ್ 27 ರಂದು ದ್ವೇಷ ಭಾಷಣ ಪ್ರಕರಣದಲ್ಲಿ ಅಜಂ ಖಾನ್ ದೋಷಿ ಎಂದು ತೀರ್ಪು ನೀಡಿದ ರಾಂಪುರ ನ್ಯಾಯಾಲಯ, ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಿದೆ.

ನಂತರ ಅಕ್ಟೋಬರ್ 28 ರಂದು ಉತ್ತರ ಪ್ರದೇಶ ವಿಧಾನಸಭೆಯ ಸೆಕ್ರೆಟರಿಯೇಟ್ ಅಜಂ ಖಾನ್ ಅವರನ್ನು ವಿಧಾಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವುದಾಗಿ ಘೋಷಿಸಿತ್ತು.

SCROLL FOR NEXT