ದೇಶ

ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 45ಕ್ಕೂ ಹೆಚ್ಚು ಕಡೆ ಎನ್​ಐಎ ದಾಳಿ

Manjula VN

ಕೊಯಮತ್ತೂರು: ಕೊಯಮತ್ತೂರು ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಗುರುವಾರ ಬೆಳಗ್ಗಿನಿಂದಲೇ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ 45ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, ತನಿಖೆ ತೀವ್ರಗೊಳಿಸಿದೆ.

ದೀಪಾವಳಿ ಸಂದರ್ಭದಲ್ಲಿ, ಅಕ್ಬೋಬರ್‌ 23 ರ ಭಾನುವಾರ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಅಳವಡಿಸಿದ್ದ ಕಾರೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು.

ಘಟನೆಯಲ್ಲಿ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಜಮೀಶಾ ಮುಬಿನ್​ ಮನೆಯಿಂದ ದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ಕೆಲವು ಐಸಿಸ್​ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಇದೀಗ ಚೆನ್ನೈ ಮತ್ತು ಕೊಯಮತ್ತೂರು ಸೇರಿ ರಾಜ್ಯದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲಿಸುತ್ತಿದೆ.

ಚೆನ್ನೈನ ಐದು ಸ್ಥಳಗಳು ಮತ್ತು ಕೊಯಮತ್ತೂರು ಕೋಟೆ ಮೇಡು, ಉಕ್ಕಡಂ, ಪೊನ್ವಿಜ ನಗರ, ರತ್ನಪುರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಎನ್‌ಐಎ ಕಾರ್ಯಾಚರಣೆ ಕೈಗೊಂಡಿದೆ. ನಿಷೇಧಿತ ಸಂಘಟನೆಗಳ ಬೆಂಬಲಿಗರ ಮನೆಗಳಲ್ಲಿ ಶೋಧ ನಡೆಯುತ್ತಿದೆ.

SCROLL FOR NEXT