ದೇಶ

ರಾಜೀವ್ ಗಾಂಧಿ ಹಂತಕರ ಬಿಡುಗಡೆ ಬಗ್ಗೆ ಕೇಂದ್ರ ಮೌನ; "ಉಗ್ರರೊಂದಿಗೆ ರಾಜಿ" ಎಂದ ಕಾಂಗ್ರೆಸ್

Lingaraj Badiger

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಉಳಿದ ಆರು ಅಪರಾಧಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡುವಂತೆ ಸುಪ್ರಿಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಮೋದಿ ಸರ್ಕಾರ ಮೌನ ವಹಿಸಿರುವುದು ‘ಭಯೋತ್ಪಾದನಾ ಕೃತ್ಯದ ಜತೆ ರಾಜಿ ಮಾಡಿಕೊಂಡಂತೆ’ ಎಂದು ಕಾಂಗ್ರೆಸ್ ಶನಿವಾರ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರ್ ಪಿ ರವಿಚಂದ್ರನ್ ಸೇರಿದಂತೆ ಆರು ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ಪೀಠವು ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಎ ಜಿ ಪೆರಾರಿವಾಲನ್ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅವರ ವಿಷಯದಲ್ಲೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಹೇಳಿದೆ.

ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್, ಭಯೋತ್ಪಾದಕರ ಬಗ್ಗೆ ಯಾವುದೇ ಸಹಾನುಭೂತಿ ಇರಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳ ಬಿಡುಗಡೆ ಕುರಿತು ಮೋದಿ ಸರ್ಕಾರದ ಮೌನ ಖಂಡನೀಯ. ಇದು ಭಯೋತ್ಪಾದನಾ ಕೃತ್ಯದ ಜತೆಗಿನ ರಾಜಿ ಎಂದು ವೇಣುಗೋಪಾಲ್ ಹೇಳಿದ್ದಾರೆ. ಅಲ್ಲದೆ ಈ ಭಯೋತ್ಪಾದಕರ ಬಿಡುಗಡೆಯನ್ನು ಶ್ಲಾಘಿಸುವವರು ಪರೋಕ್ಷವಾಗಿ ಉಗ್ರರಿಗೆ ಧೈರ್ಯ ತುಂಬುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಒಂದು ದಿನದ ನಂತರ ವೇಣುಗೋಪಾಲ್ ಈ  ಹೇಳಿಕೆ ನೀಡಿದ್ದಾರೆ.

SCROLL FOR NEXT