ದೇಶ

ನೆಹರು ಜನ್ಮದಿನದ ಅಂಗವಾಗಿ ಜೈಪುರದಲ್ಲಿ 'ಭಾರತ್ ಜೋಡೋ ಪಾದಯಾತ್ರೆ' ಹಮ್ಮಿಕೊಂಡ ಕಾಂಗ್ರೆಸ್

Ramyashree GN

ಜೈಪುರ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಕಾಂಗ್ರೆಸ್ ಸೋಮವಾರ ಇಲ್ಲಿ ಸಾಂಕೇತಿಕ 'ಭಾರತ್ ಜೋಡೋ ಪಾದಯಾತ್ರೆ' ಯನ್ನು ಕೈಗೊಳ್ಳಲಾಯಿತು.

ಟ್ರಿಪೋಲಿಯಾ ಗೇಟ್‌ನಿಂದ ರಾಮ್ ನಿವಾಸ್ ಗಾರ್ಡನ್‌ವರೆಗೆ ನಡೆದ ಪಾದಯಾತ್ರೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾಗವಹಿಸಿದ್ದರು. ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಸೇರಿದಂತೆ ಹಲವಾರು ಶಾಸಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಗೆಹ್ಲೋಟ್ ಅವರು ಇಲ್ಲಿನ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

'ನೆಹರೂ ಒಬ್ಬ ಮಹಾನ್ ರಾಜಕಾರಣಿ ಮತ್ತು ಶ್ರೇಷ್ಠ ಚಿಂತಕ ಎಂದು ಬಣ್ಣಿಸಿದ ಅವರು, ನೆಹರೂ ಅವರು ನುರಿತ ರಾಜಕಾರಣಿ ಮಾತ್ರವಲ್ಲದೆ ದೂರದೃಷ್ಟಿಯುಳ್ಳವರು ಮತ್ತು ಆಧುನಿಕ ಭಾರತವನ್ನು ನಿರ್ಮಿಸಿದವರು' ಎಂದು ಹೇಳಿದರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಮಕ್ಕಳೊಂದಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಕ್ಕಳ ದಿನವನ್ನು ಆಚರಿಸಿದರು.

ಇದೇ ವೇಳೆ ಮುಖ್ಯಮಂತ್ರಿಗಳ ನಿವಾಸದಲ್ಲಿ ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಪ್ತಾಹವನ್ನು ಗೆಹ್ಲೋಟ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಮತ್ತು ಯುವಕರಲ್ಲಿ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳು ದೇಶದ ಭವಿಷ್ಯವಾಗಿದ್ದು, ಶಿಕ್ಷಣದ ಜೊತೆಗೆ ಸುಸಂಸ್ಕೃತವಾಗುವುದು ಅಗತ್ಯ. ಇದಕ್ಕಾಗಿ ಅವರಿಗೆ ದೇಶ ಮತ್ತು ರಾಜ್ಯದ ಶ್ರೇಷ್ಠ ಸಂಸ್ಕೃತಿ, ಮಹಾಪುರುಷರ ಆದರ್ಶ, ಅವರ ಹೋರಾಟ, ತ್ಯಾಗ, ಬಲಿದಾನದ ಬಗ್ಗೆ ತಿಳಿಹೇಳಬೇಕು ಎಂದರು.

ನೆಹರೂ, ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮತ್ತು ಭೀಮರಾವ್ ಅಂಬೇಡ್ಕರ್ ಸೇರಿದಂತೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಓದುವಂತೆ ಗೆಹ್ಲೋಟ್ ಮಕ್ಕಳಿಗೆ ಹೇಳಿದರು.

ಉತ್ತಮ ಶಿಕ್ಷಣ ಮತ್ತು ಆರೋಗ್ಯದೊಂದಿಗೆ ಸುಸಂಸ್ಕೃತ ಪೀಳಿಗೆಯನ್ನು ಸೃಷ್ಟಿಸುವುದು ಸರ್ಕಾರ ಮತ್ತು ಸಮಾಜದ ದೊಡ್ಡ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಪಂಡಿತ್ ಜವಾಹರಲಾಲ್ ನೆಹರು ಬಾಲ ಸಾಹಿತ್ಯ ಅಕಾಡೆಮಿಯನ್ನು ರಾಜಸ್ಥಾನ ಸರ್ಕಾರ ಸ್ಥಾಪಿಸಿದ್ದು, ಮುಂದಿನ ರಾಜ್ಯ ಬಜೆಟ್ ಅನ್ನು ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮಮತಾ ಭೂಪೇಶ್, ರಾಜಸ್ಥಾನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

SCROLL FOR NEXT