ದೇಶ

ನಟಿ ಸನ್ನಿ ಲಿಯೋನ್ ವಿರುದ್ಧದ ವಂಚನೆ ಪ್ರಕರಣ: ಮುಂದಿನ ವಿಚಾರಣೆಗೆ ಕೇರಳ ಹೈಕೋರ್ಟ್ ತಡೆ

Ramyashree GN

ಕೊಚ್ಚಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಇತರ ಇಬ್ಬರ ವಿರುದ್ಧ ರಾಜ್ಯ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗ ದಾಖಲಿಸಿರುವ ವಂಚನೆ ಪ್ರಕರಣದ ಮುಂದಿನ ವಿಚಾರಣೆಗೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ನಾಲ್ಕು ವರ್ಷಗಳ ಹಿಂದೆ ಕೋಯಿಕ್ಕೋಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಂಸ್ಥೆಯೊಂದರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಪರಾಧ ವಿಭಾಗವು ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ನಟಿ ಅರ್ಜಿ ಸಲ್ಲಿಸಿದ್ದರು.

ಈ ಮನವಿಯನ್ನು ಪರಿಗಣಿಸಿರುವ ನ್ಯಾಯಮೂರ್ತಿ ಜಿಯಾದ್ ರಹಮಾನ್ ಅವರು, ನಟಿಯ ವಿರುದ್ಧದ ಮುಂದಿನ ವಿಚಾರಣೆಗೆ ತಡೆ ನೀಡಿದ್ದಾರೆ.

ಮನವಿಯಲ್ಲಿ, ತನ್ನ, ತನ್ನ ಪತಿ ಮತ್ತು ಅವರ ಉದ್ಯೋಗಿಯ ವಿರುದ್ಧದ ವಂಚನೆ ಆರೋಪಗಳನ್ನು ತಿರಸ್ಕರಿಸಿದ್ದಾರೆ. ತಾನು ಇಲ್ಲಿಯವರೆಗೆ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಸನ್ನಿಲಿಯೋನ್ ವಾದಿಸಿದ್ದಾರೆ.

ನಮ್ಮ ವಿರುದ್ಧ ಯಾವುದೇ ವಸ್ತುನಿಷ್ಠ ಅಥವಾ ಸ್ಪಷ್ಟ ಸಾಕ್ಷಿಗಳು ಕಂಡುಬಂದಿಲ್ಲದಿದ್ದರೂ, ತಮ್ಮ ವಿರುದ್ಧದ ದೀರ್ಘಾವಧಿಯ ವಿಚಾರಣೆಯ ಪ್ರಕ್ರಿಯೆಯಿಂದಾಗಿ ನಾವು ಹೇಳಲಾಗದ ದುಃಖಕ್ಕೆ ಒಳಗಾಗಿದ್ದೇವೆ ಮತ್ತು ತುಂಬಲಾರದ ನಷ್ಟವನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆಯೋಜಕರಾದ ಎರ್ನಾಕುಲಂ ಜಿಲ್ಲೆಯ ಶಿಯಾಸ್ ಕುಂಜುಮೊಹಮ್ಮದ್ ಎಂಬುವವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೇರಳ ಮತ್ತು ವಿದೇಶಗಳಲ್ಲಿ ಸ್ಟೇಜ್ ಶೋಗಳನ್ನು ನೀಡಲು 39 ಲಕ್ಷ ರೂಪಾಯಿ ಪಡೆದಿದ್ದರೂ ಸನ್ನಿ ಲಿಯೋನ್ ಮತ್ತು ಇತರರು ಈ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಕುಂಜುಮೊಹಮ್ಮದ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

SCROLL FOR NEXT