ದೇಶ

ರಾಜೀವ್ ಗಾಂಧಿ ಹಂತಕರ ಬಿಡುಗಡೆ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಿದ ಕೇಂದ್ರ

Lingaraj Badiger

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಗುರುವಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

ಪ್ರಕರಣದಲ್ಲಿ ತಾನು ಪ್ರತಿವಾದಿಯಾಗಿದ್ದರೂ ತನ್ನ ಅಭಿಪ್ರಾಯ ಆಲಿಸದೆ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಪ್ರತಿಪಾದಿಸಿರುವ ಕೇಂದ್ರ, ಆದೇಶ ಮರುಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ನವೆಂಬರ್ 11 ರಂದು, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಬಿವಿ ನಾಗರತ್ನ ಅವರ ಪೀಠ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ ಆರು ಅಪರಾಧಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

ಆರು ಅಪರಾಧಿಗಳಾದ ಎಸ್ ನಳಿನಿ, ಆರ್ ಪಿ ರವಿಚಂದ್ರನ್, ಜಯಕುಮಾರ್, ಶಾಂತನ್, ಮುರುಗನ್ ಮತ್ತು ರಾಬರ್ಟ್ ಪಯಾಸ್ ಜೈಲಿನಿಂದ ಬಿಡುಗಡೆಯಾದ ಕೆಲವು ದಿನಗಳ ನಂತರ ಕೇಂದ್ರ ಸುಪ್ರೀಂ ಮೊರೆ ಹೋಗಿದೆ.

ಈ ಆರು ಅಪರಾಧಿಗಳಲ್ಲಿ ನಾಲ್ವರು ಶ್ರೀಲಂಕಾದವರಾಗಿದ್ದಾರೆ. ಇವರು ದೇಶದ ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಿದ ಭೀಕರ ಅಪರಾಧಕ್ಕಾಗಿ ಶಿಕ್ಷೆಗೊಳಗಾದವರು ಎಂದು ಕೇಂದ್ರ ಸರ್ಕಾರ ಹೇಳಿದೆ. ಅವರಿಗೆ ಕ್ಷಮೆ ನೀಡುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವಾಗತಾರ್ಹವಲ್ಲ ಎಂದು ಕೇಂದ್ರ ಹೇಳಿದೆ.

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮೇ 21,1991ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಜೀವ್ ಗಾಂಧಿಯರನ್ನು ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

SCROLL FOR NEXT