ದೇಶ

ಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಕ್ಕೆ ಗುತ್ತಿಗೆದಾರರೇ ಹೊಣೆ: ಹೈಕೋರ್ಟ್

Vishwanath S

ಶಿಲ್ಲಾಂಗ್: ಕಾಮಗಾರಿ ಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವಂತೆ ಮೇಘಾಲಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯೆಂಗ್ಡೋಹ್ ಅವರ ವಿಭಾಗೀಯ ಪೀಠವು, ನಿಜವಾಗಿಯೂ, ರಾಜ್ಯವು ಒಂದು ರೀತಿಯ ವಾರಂಟಿಯನ್ನು ಪಡೆಯುವುದು ಒಳ್ಳೆಯದು ಎಂದು ಹೇಳಿದೆ.

ಪಶ್ಚಿಮ ಮೇಘಾಲಯದ ಅಜಿಯಾ-ಮೆಂಧಿಪಾರಾ-ಫುಲ್ಬರಿ-ತುರಾ(ಎಎಂಪಿಟಿ) ರಸ್ತೆಯ ನಿರ್ಮಾಣ ಮತ್ತು ದುರಸ್ತಿ ವಿಳಂಬದ ಹಿನ್ನೆಲೆಯಲ್ಲಿ ಎಎಚ್ ಹಜಾರಿಕಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿತ್ತು.

ನಿರ್ಮಾಣ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ರಸ್ತೆಗಳು ಹಾಳಾಗದಂತೆ ಗುತ್ತಿಗೆದಾರರಿಗೆ ಅಗತ್ಯವಿರುವ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಪೀಠವು ರಸ್ತೆ ವಿಸ್ತರಣೆಯ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡುವ PWD (ರಸ್ತೆಗಳು) ಮೇಲ್ವಿಚಾರಕ ಎಂಜಿನಿಯರ್‌ಗೆ ನಿರ್ದೇಶನ ನೀಡಿದೆ. 

ಹೈಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ರಾಜ್ಯ ಸರ್ಕಾರವು, ಕಾಮಗಾರಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. 41 ಕಿಮೀ ವ್ಯಾಪ್ತಿಯಲ್ಲಿ ಕನಿಷ್ಠ 33 ಕಿಮೀ ಪೂರ್ಣಗೊಂಡಿದೆ ಮತ್ತು ಉಳಿದ ಭಾಗಗಳಲ್ಲಿ ಕೆಲಸ ಭರದಿಂದ ಸಾಗಿದೆ ಎಂದು ಸಲ್ಲಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಮುಂದಿನ ವರ್ಷ ಫೆಬ್ರವರಿ 20ರಂದು ನಡೆಯಲಿದೆ.

SCROLL FOR NEXT