ದೇಶ

ದೇಹ ಕಾಣದಂತೆ 'ಓವರ್ ಕೋಟ್' ಧರಿಸಿ: ತಮಿಳುನಾಡು ಕಾಲೇಜು ಅಧ್ಯಾಪಕರಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ

Nagaraja AB

ಕೊಯಮತ್ತೂರು: ತಮಿಳುನಾಡಿನ ಎಲ್ಲಾ ಕಾಲೇಜು ಅಧ್ಯಾಪಕರು ತಮ್ಮ ದೇಹ ಕಾಣದಂತೆ  'ಓವರ್ ಕೋಟ್' ಧರಿಸುವಂತೆ ತಮಿಳುನಾಡು ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ಶಿಕ್ಷಣ ನಿರ್ದೇಶನಾಲಯಕ್ಕೆ ಪತ್ರ ಕಳುಹಿಸಿದ್ದು, ವಿದ್ಯಾರ್ಥಿಗಳಿಂದ ತಮ್ಮನ್ನು ಪ್ರತ್ಯೇಕಗೊಳಿಸಲು ಡ್ರಸ್ ಕೋಡ್ ಅನುಸರಿಸುವಂತೆ ಸಲಹೆ ನೀಡಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಪಿ. ಧನಶೇಖರ್ ಅಕ್ಟೋಬರ್ 18 ರಂದು ತಾಂತ್ರಿಕ ಶಿಕ್ಷಣದ ನಿರ್ದೇಶನಾಲಯಕ್ಕೆ ಬರೆದಿರುವ ಪತ್ರದಲ್ಲಿ ಈ ರೀತಿ ಸಲಹೆ ನೀಡಲಾಗಿದೆ. 

ಇದು ಉತ್ತಮ ನಿರ್ಧಾರವಾಗಿದೆ. ಈಗಾಗಲೇ ಅನೇಕ ಸ್ವಾಯತ್ತ ಕಾಲೇಜುಗಳಲ್ಲಿ ಮಹಿಳಾ ಸಿಬ್ಬಂದಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಓವರ್ ಕೋಟ್ ಧರಿಸಿದಾಗ ಮಹಿಳಾ ಸಿಬ್ಬಂದಿ ತರಗತಿಯಲ್ಲಿ ಆರಾಮದಾಯಕ ಅನ್ನಿಸುತ್ತದೆ. ಸಂಸ್ಥೆಯ ಒಳಗಡೆ ಮಹಿಳಾ ಸಿಬ್ಬಂದಿಯಲ್ಲಿಯೂ ಸಮಾನತೆಯ ಭಾವನೆ ಮೂಡುತ್ತದೆ ಎಂದು ಭಾರತಿಯಾರ್ ವಿಶ್ವವಿದ್ಯಾಲಯದ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ. ಪೊನ್ನುಸ್ವಾಮಿ ಹೇಳಿದ್ದಾರೆ. 

ಬೋಧಕ ಸಿಬ್ಬಂದಿ ಡ್ರೆಸ್ ಕೋಡ್ ಗೆ ನೀತಿ ಸಂಹಿತೆಯನ್ನು ಶಿಕ್ಷಣ ಇಲಾಖೆ ಮೊದಲು ಬಿಡುಗಡೆ ಮಾಡಬೇಕಾಗಿದೆ. ಟೈ ಧರಿಸದಿದ್ದಕ್ಕೆ ಎರಡು ವರ್ಷಗಳ ಹಿಂದೆ ರೂ. 500 ದಂಡ ಪಾವತಿಸಿದ್ದೇನೆ. ಇಂತಹ ನೀತಿ ರೂಪಿಸುವಾಗ ಮೊದಲಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಇಲಾಖೆ ರೂಪಿಸಬೇಕು ಎಂದು ಖಾಸಗಿ ಕಾಲೇಜೊಂದರ ಸಹಾಯಕ ಪ್ರೊಫೆಸರ್ ಕೆ. ನಾರಾಯಣನ್ ಒತ್ತಾಯಿಸಿದ್ದಾರೆ. 

ಸರ್ಕಾರಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಜಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ  ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಪಿ. ಧನಶೇಖರ್, ಆಯಾಯ ವಿಭಾಗಗಳ ನಿರ್ದೇಶಕರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು. ಆದಾಗ್ಯೂ,  ಪತ್ರದ ಬಗ್ಗೆ ಏನೂ ಗೊತ್ತಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಎಂ. ಈಶ್ವರ್ ಮೂರ್ತಿ ಹೇಳಿದ್ದಾರೆ. 

SCROLL FOR NEXT