ದೇಶ

ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ನೇಮಕ

Nagaraja AB

ನವದೆಹಲಿ: ಶುಕ್ರವಾರವಷ್ಟೇ ಸ್ವಯಂ ನಿವೃತ್ತಿ ಪಡೆದ ಪಂಜಾಬ್ ಕೇಡರ್‌ನ 1985 ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಇದೇ ವರ್ಷ ಡಿಸೆಂಬರ್ 31ಕ್ಕೆ ಅವರು ನಿವೃತ್ತಿಯಾಗಬೇಕಿತ್ತು. ಈ ಹೊಸ ಜವಾಬ್ದಾರಿಯನ್ನು  ತೆಗೆದುಕೊಂಡರೆ, ಹಾಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ 2025ರಲ್ಲಿ ಅಧಿಕಾರದಿಂದ ನಿರ್ಗಮಿಸಿದ ನಂತರ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗುತ್ತಾರೆ. ಚುನಾವಣಾ ಸಮಿತಿಯಲ್ಲಿ ಸಿಇಸಿ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರೊಂದಿಗೆ ಅರುಣ್ ಗೋಯೆಲ್ ಸೇರಲಿದ್ದಾರೆ. 

ಸಿಇಸಿಯಾಗಿದ್ದ  ಸುಶೀಲ್ ಚಂದ್ರ ಈ ವರ್ಷ ಮೇ ನಲ್ಲಿ ನಿವೃತ್ತಿಯಾದ ನಂತರ ಈ ಹುದ್ದೆ ಖಾಲಿಯಿತ್ತು. ಭಾರೀ ಉದ್ಯಮಗಳ ಕಾರ್ಯದರ್ಶಿಯಾಗಿದ್ದ ಗೋಯೆಲ್ ಶುಕ್ರವಾರವಷ್ಟೇ ಸ್ವಯಂ ನಿವೃತ್ತಿ ಪಡೆದರು. ಅವರು ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಗೋಯೆಲ್ ಅವರು ಡಿಸೆಂಬರ್ 2027 ರವರೆಗೆ ಅಧಿಕಾರದಲ್ಲಿರುತ್ತಾರೆ.

ಗುಜರಾತ್  ಚುನಾವಣೆಗೆ ಕೆಲವು ದಿನಗಳಿರುವಂತೆಯೇ ಗೋಯೆಲ್ ಅವರ ನೇಮಕವಾಗಿದೆ. ಮುಂಬರುವ ತಿಂಗಳುಗಳಲ್ಲಿ ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಕರ್ನಾಟಕಕ್ಕೆ ಚುನಾವಣಾ ವೇಳಾಪಟ್ಟಿಯನ್ನು ನಿರ್ಧರಿಸುವಾಗ ಚುನಾವಣಾ ಸಮಿತಿಯು ತನ್ನ ಸಂಪೂರ್ಣ ಶಕ್ತಿಯನ್ನು ಹೊಂದಿರುತ್ತದೆ. 

SCROLL FOR NEXT