ದೇಶ

ತೆಲಂಗಾಣ: ವಿದೇಶದಿಂದ ತಂದಿದ್ದ ಚಾಕೊಲೇಟ್ ತಿನ್ನುವಾಗ ಉಸಿರುಗಟ್ಟಿ 8 ವರ್ಷದ ಮಗು ಸಾವು

Ramyashree GN

ಹೈದರಾಬಾದ್: ತೆಲಂಗಾಣದ ವಾರಂಗಲ್ ಪಟ್ಟಣದಲ್ಲಿ ಎಂಟು ವರ್ಷದ ಬಾಲಕ ತನ್ನ ತಂದೆ ವಿದೇಶದಿಂದ ತಂದಿದ್ದ ಚಾಕೊಲೇಟ್‌ ಸೇವಿಸುವ ವೇಳೆ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆಸಿದೆ.

ಸಂದೀಪ್ ಸಿಂಗ್ ಎಂಬ ಬಾಲಕನ ಗಂಟಲಿಗೆ ಚಾಕೊಲೇಟ್ ಸಿಕ್ಕಿಹಾಕಿಕೊಂಡಿದೆ. ಕೂಡಲೇ ಆತನನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ.

ಪೊಲೀಸರ ಪ್ರಕಾರ, ಪಟ್ಟಣದಲ್ಲಿ ಎಲೆಕ್ಟ್ರಿಕಲ್ ಅಂಗಡಿಯನ್ನು ನಡೆಸುತ್ತಿರುವ ಕಂಗಾನ್ ಸಿಂಗ್ ಅವರ ಕುಟುಂಬದಲ್ಲಿ ದುರಂತ ಸಂಭವಿಸಿದೆ. ರಾಜಸ್ಥಾನ ಮೂಲದ ಕಂಗಾನ್ ಸಿಂಗ್ ಸುಮಾರು 20 ವರ್ಷಗಳ ಹಿಂದೆ ವಾರಂಗಲ್‌ಗೆ ವಲಸೆ ಬಂದಿದ್ದು, ಕುಟುಂಬ ಮತ್ತು ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ಆಸ್ಟ್ರೇಲಿಯಾ ಪ್ರವಾಸದಿಂದ ವಾಪಸಾಗುವಾಗ ಕಂಗಾನ್ ಸಿಂಗ್ ತಮ್ಮ ಮಕ್ಕಳಿಗೆ ಚಾಕೊಲೇಟ್ ತಂದಿದ್ದರು. ಸಂದೀಪ್ ಶನಿವಾರ ತನ್ನ ಶಾಲೆಗೆ ಕೆಲವು ಚಾಕೊಲೇಟ್‌ಗಳನ್ನು ತೆಗೆದುಕೊಂಡು ಹೋಗಿದ್ದ. ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸಂದೀಪ್ ಬಾಯಿಗೆ ಚಾಕೊಲೇಟ್‌ ಹಾಕಿಕೊಂಡಿದ್ದಾನೆ. ಆದರೆ, ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಬಳಿಕ ಆತ ತರಗತಿಯಲ್ಲೇ ಕುಸಿದು ಬಿದ್ದಿದ್ದಾನೆ ಮತ್ತು ಉಸಿರುಗಟ್ಟುತ್ತಿದ್ದ. ಈ ವೇಳೆ ಶಾಲೆಯ ಅಧಿಕಾರಿಗಳು ಸಂದೀಪ್‌ನನ್ನು ಸರ್ಕಾರಿ ಎಂಜಿಹೆಚ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಆದರೆ, ಸಂದೀಪ್‌ನನ್ನು ರಕ್ಷಿಸಲು ವೈದ್ಯರು ಪ್ರಯತ್ನಿಸಿದರೂ, ಆತ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

SCROLL FOR NEXT