ದೇಶ

ನೋಯ್ಡಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮಿ ಸಿಂಗ್ ನೇಮಕ, ಯುಪಿಯ ಮೊದಲ ಮಹಿಳಾ ಪೊಲೀಸ್ ಆಯುಕ್ತೆ

Lingaraj Badiger

ನೋಯ್ಡಾ: ಉತ್ತರ ಪ್ರದೇಶ ಸರ್ಕಾರ ಐಪಿಎಸ್ ಅಧಿಕಾರಿ ಲಕ್ಷ್ಮಿ ಸಿಂಗ್ ಅವರನ್ನು ನೋಯ್ಡಾ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದ್ದು, ರಾಜ್ಯದ ಪೊಲೀಸ್ ಕಮಿಷನರೇಟ್ ಮುಖ್ಯಸ್ಥರಾಗಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೋಯ್ಡಾ ಆಯುಕ್ತರಾಗಿದ್ದ ಅಲೋಕ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ 2000 ಬ್ಯಾಚ್ ಐಪಿಎಸ್ ಅಧಿಕಾರಿ ಲಕ್ಷ್ಮಿ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಸಿಂಗ್ ಅವರು ಬುಧವಾರ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

1995ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಸಿಂಗ್ ಅವರನ್ನು ರಾಜ್ಯ ರಾಜಧಾನಿ ಲಖನೌದಲ್ಲಿರುವ ಡಿಜಿಪಿ ಕಚೇರಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ(ಎಡಿಜಿಪಿ) ನೇಮಕ ಮಾಡಲಾಗಿದೆ. ಅಲೋಕ್ ಸಿಂಗ್ ಸೇರಿದಂತೆ ಒಟ್ಟು 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

48 ವರ್ಷದ ಲಕ್ಷ್ಮಿ ಸಿಂಗ್ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಮಹಿಳಾ ಐಪಿಎಸ್ ಟಾಪರ್ (ಒಟ್ಟಾರೆ 33 ನೇ ರ್ಯಾಂಕ್) ಆಗಿದ್ದು, ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಅತ್ಯುತ್ತಮ ಪ್ರೊಬೇಷನರ್ ಎಂಬ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ತರಬೇತಿ ಅವಧಿಯಲ್ಲಿ ಲಕ್ಷ್ಮಿ ಸಿಂಗ್ ಅವರಿಗೆ ಪ್ರಧಾನಮಂತ್ರಿ ಬೆಳ್ಳಿ ಪದಕ ಮತ್ತು ಗೃಹ ಸಚಿವರ ಪಿಸ್ತೂಲ್ ಕೂಡ ಲಭಿಸಿದೆ.

SCROLL FOR NEXT