ದೇಶ

ಉತ್ತರಪ್ರದೇಶದಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ 6 ಮಂದಿ ಸಜೀವ ದಹನ, ರೂ.2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ ಆದಿತ್ಯಾನಾಥ್

Manjula VN

ಫಿರೋಜಾಬಾದ್ (ಉತ್ತರ ಪ್ರದೇಶ): ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಮೂವರು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೃತ ರಾಮನ್ ಕುಮಾರ್, ಎಲೆಕ್ಟ್ರಾನಿಕ್ಸ್ ಮತ್ತು ಆಭರಣ ಅಂಗಡಿಯ ಮಾಲೀಕರಾಗಿದ್ದು, ಒಂಬತ್ತು ಸದಸ್ಯರಿರುವ ಕುಟುಂಬದೊಂದಿಗೆ ಕಟ್ಟಡದಲ್ಲಿ ವಾಸಿಸವಿದ್ದರು. ನಿನ್ನೆ ಸಂಜೆ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಎಲ್ಲೆಡೆ ಅಗ್ನಿಯ ಕೆನ್ನಾಲಿಗೆ ಹರಡಿದೆ. ಈ ವೇಳೆ ಕಟ್ಟಡದಿಂದ ಹೊರ ಬರಲಾಗದೆ ಮಕ್ಕಳು ಸೇರಿ 6 ಮಂದಿ ಸಜೀವ ದಹನವಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಆಗ್ರಾ, ಇಟಾಹ್, ಮೈನ್‌ಪುರಿ ಮತ್ತು ಫಿರೋಜಾಬಾದ್‌ನ ಸುಮಾರು 18 ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ 12 ಠಾಣೆಗಳ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ಮಾಡಿದರು ಎಂದು ಫಿರೋಜಾಬಾದ್'ನ ಎಸ್'ಪಿ ಆಶಿಶ್ ತಿವಾರಿ ಹೇಳಇದ್ದಾರೆ.

ಈ ನಡುವೆ ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ಯೋಗಿ ಆದಿತ್ಯನಾಥ್ ಅವರು, ಕೂಡಲೇ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡುವಂತೆ ಸೂಚಿಸಿದರು.

SCROLL FOR NEXT