ದೇಶ

ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಶ್ರದ್ಧಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ಅಫ್ತಾಬ್ ಪೂನಾವಾಲಾ

Ramyashree GN

ನವದೆಹಲಿ: ರಾಷ್ಟ್ರ ರಾಜಧಾನಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ನಡೆಸಿದ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ತನ್ನ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಪಾರ್ಟ್ನರ್ ಶ್ರದ್ಧಾ ವಾಲ್ಕರ್‌ನನ್ನು ಕೊಂದು, ಆಕೆಯ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದಾಗಿ ಆಫ್ತಾಬ್ ಅಮೀನ್ ಪೂನಾವಾಲಾ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರು ಸೆಷನ್ಸ್‌‌ಗಳ ನಂತರ, ಸುಳ್ಳು ಪತ್ತೆ ಪರೀಕ್ಷೆಯು ಅಂತಿಮವಾಗಿ ಮಂಗಳವಾರ ಕೊನೆಗೊಂಡಿತು ಎಂದು ಎಫ್ಎಸ್ಎಲ್ ಮೂಲಗಳು ತಿಳಿಸಿವೆ.

'ಶ್ರದ್ಧಾಳನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಆತ ಹಲವಾರು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದನು' ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ, ದೆಹಲಿ ಪೊಲೀಸರು ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್‌ನನ್ನು ಭೇಟಿಯಾಗಿದ್ದ ಇತರ ಯುವತಿಯನ್ನು ಸಂಪರ್ಕಿಸಿದ್ದರು. ವೃತ್ತಿಯಲ್ಲಿ ಮನಶಾಸ್ತ್ರಜ್ಞೆಯಾಗಿದ್ದ ಮಹಿಳೆಗೆ ಅಫ್ತಾಬ್ ನೀಡಿದ್ದ ಶ್ರದ್ಧಾಳ ಉಂಗುರವನ್ನು ಅಕ್ಟೋಬರ್ 12ರಂದು ಪೊಲೀಸರು ವಶಪಡಿಸಿಕೊಂಡಿದ್ದರು.

ಆಫ್ತಾಬ್, ಶ್ರದ್ಧಾಳನ್ನು ಮೊದಲು ಭೇಟಿಯಾಗಿದ್ದ ಅದೇ ಮೊಬೈಲ್ ಡೇಟಿಂಗ್ ಅಪ್ಲಿಕೇಶನ್ 'ಬಂಬಲ್' ನಲ್ಲಿ ಮತ್ತೋರ್ವ ಮಹಿಳೆಯ ಪರಿಚಯ ಮಾಡಿಕೊಂಡಿದ್ದ.

ಪೊಲೀಸರಿಗೆ ಮಹಿಳೆ ನೀಡಿರುವ ಹೇಳಿಕೆಯಲ್ಲಿ, ಅಫ್ತಾಬ್‌ನನ್ನು ಶ್ರದ್ಧಾರೊಂದಿಗೆ ಇದ್ದ ಆತನ ಚತ್ತರ್‌ಪುರದ ನಿವಾಸದಲ್ಲಿ ಎರಡು ಬಾರಿ ಭೇಟಿಯಾಗಿದ್ದೆ. ಆದರೆ, ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿರುವ ಸಂತ್ರಸ್ತೆಯ ದೇಹದ ಭಾಗಗಳ ಬಗ್ಗೆ ನನಗೆ ಯಾವುದೇ ಸುಳಿವು ಇರಲಿಲ್ಲ ಎಂದಿದ್ದಾರೆ.

ಮೂಲಗಳ ಪ್ರಕಾರ, ಮೇ 18 ರಂದು ಶ್ರದ್ಧಾಳನ್ನು ಕೊಂದ 12 ದಿನಗಳ ನಂತರ, ಮೇ 30 ರಂದು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮಹಿಳೆಯು ಅಫ್ತಾಬ್‌ನಿಗೆ ಪರಿಚಯವಾಗಿದ್ದಾಳೆ.

ಈ ಪ್ರಕರಣದಲ್ಲಿ ಸುಳ್ಳು ಪತ್ತೆ ಪರೀಕ್ಷೆ ಮತ್ತು ನಾರ್ಕೋ ಪರೀಕ್ಷೆ ಅತ್ಯಗತ್ಯ ಎಂದು ಮೂಲಗಳು ತಿಳಿಸಿದ್ದು, ವಿಚಾರಣೆ ವೇಳೆ ಅಫ್ತಾಬ್ ವಂಚಕ ಸ್ವಭಾವದವನಾಗಿದ್ದ ಮತ್ತು ವಿಚಾರಣೆ ನಡೆಸಿದವರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿಸಿವೆ.

SCROLL FOR NEXT