ದೇಶ

ಹೃದಯಾಘಾತ: ಪುದುಚೇರಿ ಮನಕುಲ ವಿನಾಯಕ ದೇಗುಲದ ಲಕ್ಷ್ಮೀ ಆನೆ ಸಾವು!

Srinivasamurthy VN

ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ಬುಧವಾರ ನಡೆದಿದೆ.

ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ ಹೃದಯಾಘಾತವಾಗಿದ್ದು ಬಳಿಕ ಆನೆ ಮೃತಪಟ್ಟಿದೆ. ಈ ಲಕ್ಷ್ಮಿ ಎಂಬ ಹೆಸರಿನ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು 1995ರಲ್ಲಿ ದೇವಸ್ಥಾನಕ್ಕೆ ದಾನ ಮಾಡಿದ್ದರು ಮತ್ತು ಈ ಆನೆಯ ಆಶೀರ್ವಾದವನ್ನು ಪಡೆಯಲು ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

ಆನೆ ಕುಸಿಯುತ್ತಿದ್ದಂತೆಯೇ ಆನೆಯನ್ನು ನೋಡಿಕೊಳ್ಳುತ್ತಿದ್ದ ಸರ್ಕಾರದ ಪಶುವೈದ್ಯರು ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ಪರೀಕ್ಷಿಸಿ ಆನೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆನೆಯ ಆರೋಗ್ಯ ಉತ್ತಮವಾಗಿತ್ತು, ಯಾವುದೇ ತೊಂದರೆ ಇರಲಿಲ್ಲ. ಆದರೆ ಹೃದಯಾಘಾತದಿಂದ ಆನೆ ಸಾವನ್ನಪ್ಪಿದೆ ಎಂದು ಅವರು ತಿಳಿಸಿದರು. ಸರ್ಕಾರಿ ಕಾಲೇಜೊಂದರ ಸಮೀಪದ ರಸ್ತೆಯಲ್ಲಿ ಆನೆ ಕುಸಿದು ಮೃತಪಟ್ಟಿದೆ.

ಬಳಿಕ ಮುತ್ಯಾಲಪೇಟೆಯಲ್ಲಿರುವ ದೇವಸ್ಥಾನಕ್ಕೆ ಸೇರಿದ ವಿಸ್ತಾರವಾದ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ. ಆನೆಯ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಕಡೆಗಳಿಂದ ಜನರು ಆನೆ ಕೊನೆಯ ದರ್ಶನ ಪಡೆಯಲು ಆಗಮಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಸೇರಿದಂತೆ ಅಪಾರ ಸಂಖ್ಯೆಯ ಜನರು ಶ್ರೀ ಮನಕುಲ ವಿನಾಯಕ ದೇವಸ್ಥಾನದ ಮೃತಪಟ್ಟ 32 ವರ್ಷದ ಆನೆ ಲಕ್ಷ್ಮಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕ್ರೇನ್ ಸಹಾಯದಿಂದ ಆನೆಯನ್ನು ಟ್ರಕ್‌ ಮೂಲಕ ಅಂತಿಮ ಯಾತ್ರೆಯಲ್ಲಿ ಸಾಗಿಸಲು ಮುಂದಾಗಿದ್ದಾರೆ. ಇದರ ಜೊತೆಗೆ ಲಕ್ಷ್ಮೀ ಆನೆಯ ದರ್ಶನ ಪಡೆಯಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಯಿತು. ಮನಕುಲ ವಿನಾಯಕ ದೇವಸ್ಥಾನವು ಪುದುಚೇರಿಯಲ್ಲಿ ಆನೆಯನ್ನು ಹೊಂದಿರುವ ಏಕೈಕ ದೇವಾಲಯವಾಗಿದೆ.

SCROLL FOR NEXT