ದೇಶ

ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನೊ ಮೇಲ್ಮನವಿ: ಅರ್ಜಿ ವಿಚಾರಣೆಗೆ ಸುಪ್ರೀಂ ಪರಿಗಣನೆ

Lingaraj Badiger

ನವದೆಹಲಿ: 2002ರ ಗುಜರಾತ್ ಗಲಭೆಯ ವೇಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಪರಿಗಣಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಬಾನೊ ಪರ ವಕೀಲೆ ಶೋಭಾ ಗುಪ್ತಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಈಗ ಸಂವಿಧಾನ ಪೀಠದ ಭಾಗವಾಗಿರುವುದರಿಂದ ಈ ವಿಷಯವನ್ನು ಆಲಿಸುವ ಸಾಧ್ಯತೆಗಳು ಕಡಿಮೆ ಎಂದು ಗುಪ್ತಾ ವಾದಿಸಿದರು.

ಅಪರಾಧಿಗಳ ಕ್ಷಮಾಪಣೆ ಬಗ್ಗೆ ನಿರ್ಧರಿಸಲು ಗುಜರಾತ್ ಸರ್ಕಾರಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವೂ ಬಾನೊ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಮರು ಪರಿಶೀಲನಾ ಅರ್ಜಿಯನ್ನು ಮೊದಲು ಆಲಿಸಬೇಕು ಮತ್ತು ಅದು ನ್ಯಾಯಮೂರ್ತಿ ರಸ್ತೋಗಿ ಅವರ ಮುಂದೆ ವಿಚಾರಣೆಗೆ ಬರಲಿ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದರು. 

ಈ ವಿಷಯವನ್ನು ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಗುಪ್ತಾ ಮನವಿ ಮಾಡಿದರು. ಇದನ್ನು ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ, ಇಂದು ಸಂಜೆ ಅರ್ಜಿಯನ್ನು ಪರಿಶೀಲಿಸಿದ ನಂತರ ಪಟ್ಟಿ ಮಾಡುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

1992ರ ಕ್ಷಮಾಪಣಾ ನೀತಿ ಅನ್ವಯ 11 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಗುಜರಾತ್ ಸರ್ಕಾರ ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು 11 ಮಂದಿ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತು. 

ಈ ಕ್ರಮವು ರಾಷ್ಟ್ರವ್ಯಾಪಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿತ್ತು. ಅದರಲ್ಲೂ ವಿಶೇಷವಾಗಿ ಅತ್ಯಾಚಾರಿಗಳು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ವೇಳೆ ಹಿಂದೂ ಸಂಘಟನೆ ಸದಸ್ಯರು ಅವರನ್ನು ವೀರರಂತೆ ಹಾರ ಹಾಕಿ ಸ್ವಾಗತಿಸುತ್ತಿರುವ ಚಿತ್ರ ವೈರಲ್ ಆಗಿ ಅಪಾರ ಟೀಕೆಗಳು ಕೇಳಿಬಂದಿದ್ದವು. 

SCROLL FOR NEXT