ದೇಶ

ಗುಜರಾತ್‌: ಧಾರ್ಮಿಕ ಧ್ವಜ ಪ್ರದರ್ಶಿಸುವ ವಿಚಾರದಲ್ಲಿ ಕೋಮು ಘರ್ಷಣೆ, 36 ಜನರ ಬಂಧನ

Ramyashree GN

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಸಾವ್ಲಿ ಪಟ್ಟಣದಲ್ಲಿ ಧಾರ್ಮಿಕ ಧ್ವಜವನ್ನು ಹಾಕುವ ವಿಚಾರದಲ್ಲಿ ಎರಡು ಗುಂಪುಗಳು ಪರಸ್ಪರ ಘರ್ಷಣೆ ಮತ್ತು ಕಲ್ಲು ತೂರಾಟ ನಡೆಸಿದ್ದು, 36 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಧಮೀಜಿ ಕಾ ಡೇರಾ ಪ್ರದೇಶದ ವಿದ್ಯುತ್ ಕಂಬದ ಮೇಲೆ ಒಂದು ಸಮುದಾಯದ ಧ್ವಜದ ಪಕ್ಕದಲ್ಲಿ ಮತ್ತೊಂದು ಸಮುದಾಯದ ಸದಸ್ಯರು ತಮ್ಮ ಧಾರ್ಮಿಕ ಧ್ವಜವನ್ನು ಹಾಕಲು ಪ್ರಯತ್ನಿಸುತ್ತಿರುವುದನ್ನು ಜನರ ಗುಂಪೊಂದು ವಿರೋಧಿಸಿದ ನಂತರ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಸಾವ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಚಾರ ವಿಕೋಪಕ್ಕೆ ತಿರುಗಿ ಎರಡೂ ಸಮುದಾಯವದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಸದ್ಯ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆದರೆ, ವಾಹನಗಳು ಮತ್ತು ಅಂಗಡಿಗೆ ಗಲಭೆಕೋರರಿಂದ ಹಾನಿಯುಂಟಾಗಿದೆ ಎಂದು ಸಾವ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎ.ಆರ್ ಮಹಿದಾ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಎರಡೂ ಗುಂಪುಗಳಿಂದ ಎಫ್ಐಆರ್ ದಾಖಲಿಸಲಾಗಿದ್ದು, 43 ಜನರ ವಿರುದ್ಧ ಗಲಭೆ, ಕಾನೂನುಬಾಹಿರ ಸಭೆ, ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ದುಷ್ಕೃತ್ಯ ಇತ್ಯಾದಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಈವರೆಗೆ ಎರಡೂ ಸಮುದಾಯದ ಒಟ್ಟು 36 ಜನರನ್ನು ಬಂಧಿಸಲಾಗಿದೆ ಎಂದು ಮಹಿದಾ ಹೇಳಿದರು.

ಕೋಮು ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

SCROLL FOR NEXT