ದೇಶ

ಜಮ್ಮು-ಕಾಶ್ಮೀರ ಕಾರಾಗೃಹ ಅಧಿಕಾರಿ ಹತ್ಯೆ: ಮನೆ ಸಹಾಯಕ ಮುಖ್ಯ ಆರೋಪಿ, ಹತ್ಯೆ ಹೊಣೆ ಹೊತ್ತುಕೊಂಡ ಪಿಎಎಫ್ಎಫ್ ಸಂಘಟನೆ ಹೇಳಿದ್ದೇನು?

Sumana Upadhyaya

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಉನ್ನತಾಧಿಕಾರಿ ಎಚ್‌ಕೆ ಲೋಹಿಯಾ ಅವರ ಹತ್ಯೆಯ ಪ್ರಮುಖ ಆರೋಪಿ ಅವರ ಗೃಹ ಸಹಾಯಕನೇ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ. ಆರೋಪಿಯ ಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು ಆತನ ಪತ್ತೆಹಚ್ಚುವಿಕೆಗೆ ಸಾರ್ವಜನಿಕರ ಸಹಾಯ ಕೋರಿದ್ದಾರೆ. 

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಆಫ್-ಶೂಟ್ ಎಂದು ಹೇಳಲಾದ ಉಗ್ರಗಾಮಿ ಸಂಘಟನೆ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫೋರ್ಸ್ (PAFF) ಪೊಲೀಸ್ ಅಧಿಕಾರಿಯ ಹತ್ಯೆಯ ಹೊಣೆ ಹೊತ್ತುಕೊಂಡಿದೆ. 

ಕಳೆದ ಆಗಸ್ಟ್ 3 ರಂದು ಕಾರಾಗೃಹ ಉನ್ನತಾಧಿಕಾರಿ ಆಗಿ ನೇಮಕಗೊಂಡ ಲೋಹಿಯಾ ಅವರು ನಿನ್ನೆ ಸಂಜೆ ಜಮ್ಮುವಿನ ಉಧೇವಾಲಾ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಕೊಲೆಯಾಗಿದ್ದಾರೆ. ಅವರು 1992-ವಿಭಾಗದ ಐಪಿಎಸ್ ಅಧಿಕಾರಿಯಾಗಿದ್ದರು.

ಹತ್ಯೆಯ ನಂತರ, ವಿಧಿವಿಜ್ಞಾನ ತಂಡಗಳು ಮಾದರಿಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಅಪರಾಧ ನಡೆದ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಮುಖೇಶ್ ಸಿಂಗ್ ಅವರು ಇಂದು ಹೇಳಿಕೆ ನೀಡಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ, ಜಮ್ಮು-ಕಾಶ್ಮೀರದ ಗೃಹ ಸಹಾಯಕ ಯಾಸಿರ್ ಅಹ್ಮದ್ ರಾಂಬನ್ ಜಿಲ್ಲೆಯ ಕೊಲೆಯ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ ಎಂದಿದ್ದಾರೆ.

ಘಟನೆಯ ಸ್ಥಳದಿಂದ ಸಂಗ್ರಹಿಸಲಾದ ಕೆಲವು ಸಿಸಿಟಿವಿ ದೃಶ್ಯಾವಳಿಗಳು ಹತ್ಯೆಯ ನಂತರ ಶಂಕಿತ ಆರೋಪಿಗಳು ಓಡಿಹೋಗುವುದನ್ನು ತೋರಿಸುತ್ತದೆ. 

ಗೃಹ ಸಚಿವರಿಗೆ ಸಣ್ಣ ಉಡುಗೊರೆ: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಹತ್ಯೆಯಾಗಿರುವುದು ಭದ್ರತಾ ಲೋಪ ಮತ್ತು ಸೇಡಿನ ರಾಜಕಾರಣಕ್ಕೆ ಮತ್ತೊಮ್ಮೆ ಕಣಿವೆ ರಾಜ್ಯ ಸಾಕ್ಷಿಯಾಗಿದೆ. ರಾಜ್ಯಕ್ಕೆ ಭೇಟಿ ನೀಡುವ ಗೃಹ ಸಚಿವರಿಗೆ ಇದು ಒಂದು 'ಸಣ್ಣ ಉಡುಗೊರೆ' ಎಂದು ಹತ್ಯೆಯ ಹೊಣೆ ಹೊತ್ತುಕೊಂಡ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದೆ. 

ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರ ಭೇಟಿಗಾಗಿ ಗೃಹ ಸಚಿವ ಅಮಿತ್ ಶಾ ಜಮ್ಮುವಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಲೋಹಿಯಾ ಹತ್ಯೆ ನಡೆದಿದೆ. ಶಾ ಅವರು ಇಂದು ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿ ರಜೌರಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ನಾಳೆ ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಲ್ಲದೆ, ಅವರು ಉನ್ನತ ಭದ್ರತೆ ಮತ್ತು ನಾಗರಿಕ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಜೆ & ಕೆ ನ ಭದ್ರತಾ ಪರಿಸ್ಥಿತಿ ಮತ್ತು ಅಭಿವೃದ್ಧಿಯ ಸನ್ನಿವೇಶವನ್ನು ಪರಿಶೀಲಿಸುತ್ತಾರೆ.

SCROLL FOR NEXT