ದೇಶ

ಸ್ಟಾಕ್ ಮಾರ್ಕೆಟ್ ನಲ್ಲಿ ನಷ್ಟ: ತಂದೆಯನ್ನು ಕೊಂದು ತಾಯಿ ಮೇಲೆ ಮಗನಿಂದ ಭೀಕರ ಹಲ್ಲೆ; ಆರೋಪಿ ಬಂಧನ

Vishwanath S

ನವದೆಹಲಿ: ಸ್ಟಾಕ್ ಮಾರ್ಕೆಟ್ ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಮಗ ದುಡ್ಡಿಗಾಗಿ ತಂದೆಯನ್ನು ಹತ್ಯೆ ಮಾಡಿರೋ ಘಟನೆ ನವದೆಹಲಿಯಲ್ಲಿ ನಡೆದಿದೆ. 

ಹಣದ ವಿಚಾರದಲ್ಲಿ ತಂದೆಯನ್ನು ಕೊಂದು ತಾಯಿಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪದ ಮೇಲೆ 34 ವರ್ಷದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ನವದೆಹಲಿಯಲ್ಲಿ ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಸ್ವರ್ಣಜೀತ್ ಸಿಂಗ್(65) ಸಾವನ್ನಪ್ಪಿದ್ದರೆ, ಅವರ ಪತ್ನಿ ಅಜೀಂದರ್ ಕೌರ್(60) ಅವರು ಹಲ್ಲೆ ಬಳಿಕ ಬದುಕುಳಿದಿದ್ದಾರೆ. ಆದರೆ ಕೆಲವು ಗಂಭೀರವಾದ ಗಾಯಗಳಾಗಿರೋದ್ರಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ(ಪಶ್ಚಿಮ) ಘನಶ್ಯಾಮ್ ಬನ್ಸಾಲ್ ಹೇಳಿದ್ದಾರೆ.

ಇಬ್ಬರನ್ನೂ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸಾಗಿಸಲಾಯಿತು.  ಅಲ್ಲಿ ಸ್ವರ್ಣಜೀತ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಮತ್ತು ಅವರ ಪತ್ನಿಯನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಯಿತು ಎಂದರು.

ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಪಶ್ಚಿಮ ದೆಹಲಿಯ ಫತೇ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಜಸ್ದೀಪ್ ಸಿಂಗ್ ತನ್ನ ಪೋಷಕರಿಂದ ಹಣಕ್ಕಾಗಿ ಬೇಡಿಕೆಯಿಟ್ಟಾಗ ಅವರು ನಿರಾಕರಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಜಸ್ದೀಪ್ ಷೇರು ಮಾರುಕಟ್ಟೆಯಲ್ಲಿ 7 ಲಕ್ಷ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದರು. ಆತನ ಪೋಷಕರು ಹಣ ನೀಡಲು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ . ವಿವಾಹಿತ ಜಸ್ದೀಪ್ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT