ಛತ್ತೀಸ್‌ಗಢ: 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 125 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶನಿವಾರ ರಾಯ್‌ಪುರದಲ್ಲಿ ಹೆಲಿಕಾಪ್ಟರ್ ರೈಡ್ ಮೂಲಕ ಸನ್ಮಾನಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲಾವಾರು ಟಾಪರ್‌ಗಳಿಗೆ ಏಳು ಆಸನಗಳ ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾಡಿದ ಘೋಷಣೆಗೆ ಅನುಗುಣವಾಗಿ ಜಾಯ್‌ರೈಡ್‌ಗಳನ್ನು ಆಯೋಜಿಸಲಾಗಿತ್ತು ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಬೋರ್ಡ್ ಪರೀಕ್ಷೆಗಳಲ್ಲಿ ಟಾಪರ್ ಆದವರಿಗೆ ಇಂತಹ ವಿಶಿಷ್ಟ ರೀತಿಯಲ್ಲಿ ಸನ್ಮಾನಿಸುತ್ತಿರುವುದು ಇದೇ ಮೊದಲು. ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಟಾಪ್ 10 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ರೈಡ್‌ನೊಂದಿಗೆ ಬಹುಮಾನ ನೀಡಲಾಗುವುದು ಎಂದು ಮೇ ತಿಂಗಳಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದರು.
12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದ ರಾಯ್‌ಪುರದ ವರ್ಷಾ ದೇವಾಂಗನ್ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾ, ರೈಡ್ ಹೊಸ ಅನುಭವ ಕೊಟ್ಟಿತು. ಅಲ್ಲದೆ ಇದು ಕನಸು ನನಸಾಗಿತ್ತು ಎಂದು ಹೇಳಿದರು.
ನಮ್ಮ ಊರಿಗೆ ಸರಿಯಾದ ರಸ್ತೆ ಸಂಪರ್ಕ ಮತ್ತು ಇತರ ಸೌಲಭ್ಯಗಳಿಲ್ಲದ ಕಾರಣ ನನಗೆ ಹೆಲಿಕಾಪ್ಟರ್ ರೈಡ್ ತುಂಬಾ ಸಂತೋಷ ಮತ್ತು ಸ್ಮರಣೀಯ ಕ್ಷಣವಾಗಿತ್ತು ಎಂದು ನಕ್ಸಲೀಯ ಪೀಡಿತ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ದೇವಾನಂದ್ ಕಮೇಟಿ ಹೇಳಿದರು.