ದೇಶ

ರಾಜಸ್ಥಾನ: ಜೋಧ್ ಪುರದಲ್ಲಿ ಸಿಲಿಂಡರ್ ಸ್ಫೋಟ, ನಾಲ್ಕು ಮಂದಿ ದುರ್ಮರಣ, 16 ಜನರಿಗೆ ಗಾಯ

Nagaraja AB

ಜೋಧ್ ಪುರ: ರಾಜಸ್ಥಾನದ ಜೋಧ್ ಪುರದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ಕು ಮಂದಿ ದುರ್ಮರಣ ಹೊಂದಿದ್ದಾರೆ. ಘಟನೆಯಲ್ಲಿ ಇತರ 16 ಮಂದಿ ಗಾಯಗೊಂಡಿದ್ದು, ಅವರೆಲ್ಲರೂ ಎಂಜಿಹೆಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ಹಿಮಾಂಶು ಗುಪ್ತ ಆದೇಶಿಸಿದ್ದಾರೆ. ತಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. 

ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಕೀರ್ತಿ ನಗರ ಪ್ರದೇಶದ ಮನೆಯೊಂದರಲ್ಲಿ ಅರ್ಧ ಡಜನ್‌ಗೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳು ಹಠಾತ್ತನೆ ಆಫ್ ಆಗಿವೆ. ಸಿಲಿಂಡರ್ ಪೂರೈಕೆದಾರರಾದ ಭೋಮರಾಮ್ ಲೋಹರ್ ಅವರ ಮನೆಯಲ್ಲಿ ಈ ಸಿಲಿಂಡರ್ ಗಳನ್ನು ಸಂಗ್ರಹಿಸಿಡಲಾಗಿತ್ತು. ಸಿಲಿಂಡರ್ ರಿಫೀಲ್ ಮಾಡುವಾಗ ಸ್ಫೋಟ ಸಂಭವಿಸಿದೆ. ಆದರೆ, ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಎಸಿಪಿ ರಾಜೇಂದ್ರ ಪ್ರಸಾದ್ ದಿವಾಕರ್ ಹೇಳಿದ್ದಾರೆ. 

ಸಿಲಿಂಡರ್ ಸ್ಫೋಟದಿಂದ ಮೂವರು ಮಕ್ಕಳು ಹಾಗೂ ಓರ್ವ ಹಿರಿಯ ನಾಗರಿಕರೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ದಿವಾಕರ್ ಮಾಹಿತಿ ನೀಡಿದ್ದಾರೆ.

ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡು ಗೋಡೆ ಕುಸಿದು ಬಿದ್ದಿದೆ. ಸ್ಫೋಟದಲ್ಲಿ ಎರಡು ಮೊಬೈಕ್ ಮತ್ತು ವಾಹನವೊಂದಕ್ಕೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆಯಲ್ಲಿ ಮನೆಯಿಂದ ನಾಲ್ಕು ಡಜನ್ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. 

SCROLL FOR NEXT