ದೇಶ

ಪುರುಷರು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು, ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು: ಬಿಜೆಪಿ ಸಚಿವ

Ramyashree GN

ಚಂಡೀಗಢ: ಪುರುಷರು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಮತ್ತು ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು ಎಂದು ಹರಿಯಾಣದ ಸಚಿವ ಅನಿಲ್ ವಿಜ್ ಗುರುವಾರ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ಭಿನ್ನ ತೀರ್ಪು ನೀಡಿ ಮುಂದಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ (CJI) ವರ್ಗಾವಣೆ ಮಾಡಿದೆ. ಸುಪ್ರೀಂ ತೀರ್ಪು ನೀಡುವ ಕೆಲ ಹೊತ್ತಿಗೆ ಮುನ್ನ ವಿಜ್ ಅವರು ಟ್ವೀಟ್ ಮಾಡಿದ್ದರು.

'ಮಹಿಳೆಯರನ್ನು ಕಂಡಾಗ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದ ಪುರುಷರು, ಮಹಿಳೆಯರನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸಿದರು. ಪುರುಷರೇ ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಅಗತ್ಯವಿತ್ತು. ಆದರೆ, ಆ ಶಿಕ್ಷೆಯನ್ನು ಮಹಿಳೆಯರಿಗೆ ನೀಡಿದರು. ಅವರು ತಲೆಯಿಂದ ಪಾದದವರೆಗೆ ಮುಚ್ಚಿಕೊಂಡರು. ಇದು ಘೋರ ಅನ್ಯಾಯವಾಗಿದೆ' ಎಂದು ಹರಿಯಾಣ ಗೃಹ ಸಚಿವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಅದೇ ಟ್ವೀಟ್‌ನಲ್ಲಿ, ಪುರುಷರು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು ಅಥವಾ ಹಿಡಿತದಲ್ಲಿಟ್ಟುಕೊಳ್ಳಬೇಕು ಮತ್ತು ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಫೆಬ್ರುವರಿಯಲ್ಲಿ, ಕರ್ನಾಟಕದ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿರುವ ಬಗ್ಗೆ ಸಂಘರ್ಷ ಉಂಟಾಗಿದ್ದಾಗ, ಶಾಲೆ ಮತ್ತು ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ವಿಜ್ ಹೇಳಿದ್ದರು.

ಶಾಲೆಗಳಲ್ಲಿ ಹಿಜಾಬ್ ಧರಿಸುವ ಕುರಿತು ಇಂದು ಅಂತಿಮ ತೀರ್ಪು ಪ್ರಕಟವಾಗಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ತೀರ್ಪುಗಳನ್ನು ನೀಡಿದ್ದರಿಂದ ಈ ವಿಚಾರವನ್ನು ಸೂಕ್ತ ನಿರ್ದೇಶನಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುವಂತೆ ಪೀಠವು ನಿರ್ದೇಶಿಸಿದೆ.

SCROLL FOR NEXT