ದೇಶ

ಭ್ರಷ್ಟಾಚಾರ ಆರೋಪ: ಕೇರಳ ಮಾಜಿ ಸಚಿವೆ ಶೈಲಜಾ, ಇತರರ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ

Lingaraj Badiger

ತಿರುವನಂತಪುರಂ: ಕೇರಳದ ಎಲ್‌ಡಿಎಫ್ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿರುವ ಲೋಕಾಯುಕ್ತ, ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ ಕಿಟ್)ಗಳ ಖರೀದಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹಾಗೂ ಇತರ 12 ಮಂದಿ ವಿರುದ್ಧ ತನಿಖೆಗೆ ಶುಕ್ರವಾರ ಆದೇಶಿಸಿದೆ. 

ಕೋವಿಡ್-19 ಸಮಯದಲ್ಲಿ ಪಿಪಿಇ ಕಿಟ್‌ಗಳು ಮತ್ತು ಇತರ ಶಸ್ತ್ರಚಿಕಿತ್ಸಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಸಿಪಿಎಂ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ಮಾಜಿ ಸಚಿವೆ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಪಕ್ಷದೊಳಗೇ ಪ್ರಯತ್ನಗಳು ನಡೆಯುತ್ತಿರುವಾಗಲೇ ಲೋಕಾಯುಕ್ತ ತನಿಖೆಗೆ ಆದೇಶಿಸಿರುವುದು ಗಮನಾರ್ಹ.

ಈ ಹಿಂದೆ ವಿಧಾನಸಭೆಯಲ್ಲಿ ಪಿಪಿಇ ಕಿಟ್ ಆರೋಪ ಕೇಳಿಬಂದಾಗ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಸ್ಪಷ್ಟ ಉತ್ತರ ನೀಡಿದ್ದರು.

2020 ರಲ್ಲಿ ಕೇರಳ ಕೋವಿಡ್ ನಿಂದ ತತ್ತರಿಸುತ್ತಿರುವಾಗ ಪಿಪಿಇ ಕಿಟ್‌ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಹೆಚ್ಚು ದರದಲ್ಲಿ ಖರೀದಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕಿ ವೀಣಾ ಎಸ್ ನಾಯರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 9(3) ರ ಅಡಿಯಲ್ಲಿ ತನಿಖೆಗೆ ಆದೇಶಿಸಲಾಗಿದೆ.

ಶೈಲಜಾ ಅವರಲ್ಲದೆ, ಮಾಜಿ ಆರೋಗ್ಯ ಕಾರ್ಯದರ್ಶಿ ಡಾ.ರಾಜನ್ ಎನ್ ಖೋಬ್ರಾಗಡೆ, ವೈದ್ಯಕೀಯ ಸೇವಾ ನಿಗಮದ ಮಾಜಿ ಎಂಡಿ ಬಾಲಮುರಳಿ ಮತ್ತು ವೈದ್ಯಕೀಯ ಸೇವಾ ನಿಗಮದ ಮಾಜಿ ಜಿಎಂ ಎಸ್ ಆರ್ ದಿಲೀಪ್‌ಕುಮಾರ್ ಅವರು ಇತರ ಪ್ರಮುಖ ಆರೋಪಿಗಳಾಗಿದ್ದಾರೆ.

SCROLL FOR NEXT