ದೇಶ

ಕೇರಳ ರಾಜ್ಯಪಾಲರ ಫೇಸ್ ಬುಕ್ ಖಾತೆ ಹ್ಯಾಕ್!

Srinivasamurthy VN

ಕೊಚ್ಚಿನ್: ಕೇರಳ ರಾಜ್ಯಪಾಲರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು, ಈ ಬಗ್ಗೆ ಸ್ವತಃ ಅವರೇ ಶನಿವಾರ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇರಳ ರಾಜ್ಯಪಾಲ ಆರಿಫ್ ಮಹಮದ್ ಖಾನ್ ಅವರು, 'ಇಂದು ಬೆಳಗ್ಗೆಯಿಂದ ನನ್ನ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದೆ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು, ಅವರು ಖಾತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ಹಿಂದೆ RSS ಪರ ಮಾತನಾಡಿದ್ದ ಆರಿಫ್ ಮಹಮದ್ ಖಾನ್, ಕಮ್ಯುನಿಸಂ ಒಪ್ಪುವುದಾದರೆ RSS ಅನ್ನು ಏಕೆ ಒಪ್ಪುವುದಿಲ್ಲ ಎಂದು ಪ್ರಶ್ನಿಸಿ ಬಹಿರಂಗವಾಗಿಯೇ ಆರ್ ಎಸ್ಎಸ್ ಪರ ನಿಂತಿದ್ದರು. 'ವಿದೇಶಿ ನೆಲದ ಕಮ್ಯುನಿಸಿಂ ಹಾಗೂ ಅದರ ಸಿದ್ಧಾಂತಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡು ಇವರೆಲ್ಲಾ ಪಾಲನೆ ಮಾಡುತ್ತಿದ್ದಾರೆ, ಹೀಗಿದ್ದಲ್ಲಿ ನಮ್ಮದೇ ನೆಲದ ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದರು.

ಸೆಪ್ಟೆಂಬರ್ 17 ರಂದು ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಖಾನ್‌, ಆರೆಸ್ಸೆಸ್‌ನ ಕಾರ್ಯಕರ್ತನೊಬ್ಬನ ಮನೆಯಲ್ಲಿ ಮೋಹನ್‌ ಭಾಗ್ವತ್‌ ಅವರನ್ನು ಭೇಟಿಯಾಗಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಭಾರತದ ಯಾವುದೇ ರಾಜ್ಯದ ರಾಜ್ಯಪಾಲರೊಬ್ಬರು ಆರೆಸ್ಸೆಸ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದು 2015ರಲ್ಲಿಯೇ ಕೊನೆ. ಅಂದು ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ರಾಮ್‌ ನಾಯ್ಕ್‌, ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಅವರನ್ನು ಭೇಟಿ ಮಾಡಿದ್ದರು. ಅಂದು ಉತ್ತರ ಪ್ರದೇಶದ ರಾಜಭವನದಲ್ಲಿಯೇ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಕೇರಳ ರಾಜ್ಯಪಾಲ ಆರಿಫ್ ಖಾನ್ ಭೇಟಿಯಾಗಿದ್ದರು.
 

SCROLL FOR NEXT