ದೇಶ

ಅಬಕಾರಿ ನೀತಿ ಹಗರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸಮನ್ಸ್ ನೀಡಿದ ಸಿಬಿಐ

Ramyashree GN

ನವದೆಹಲಿ: ರಾಷ್ಟ್ರ ರಾಜಧಾನಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ಸಂಸ್ಥೆಯು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನಿಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ತನ್ನ ಪ್ರಧಾನ ಕಛೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಳಿದೆ ಎಂದು ಅವರು ಹೇಳಿದರು.

ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಸಿಸೋಡಿಯಾ, 'ನನ್ನ ಮನೆಯಲ್ಲಿ 14 ಗಂಟೆಗಳ ಕಾಲ ಸಿಬಿಐ ದಾಳಿ ನಡೆಸಲಾಗಿದೆ. ಆದರೆ, ಏನೂ ಪತ್ತೆಯಾಗಿಲ್ಲ. ನನ್ನ ಬ್ಯಾಂಕ್ ಲಾಕರ್ ಅನ್ನು ಹುಡುಕಿದೆ. ಅದರಿಂದಲೂ ಏನೂ ಸಿಕ್ಕಿಲ್ಲ. ನನ್ನ ಗ್ರಾಮದಲ್ಲಿಯೂ ಅವರಿಗೆ ಏನೂ ಸಿಗಲಿಲ್ಲ. ಈಗ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಸಿಬಿಐ ಹೆಡ್‌ಕ್ವಾರ್ಟರ್ಸ್‌ಗೆ ಬರುವಂತೆ ಕರೆದಿದ್ದಾರೆ. ನಾನು ಹೋಗಿ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಸತ್ಯಮೇವ ಜಯತೆ' ಎಂದಿದ್ದಾರೆ.

ಇಂಡೋ ಸ್ಪಿರಿಟ್ಸ್‌ನ ಮಾಲೀಕ ಸಮೀರ್ ಮಹೇಂದ್ರು, ಗುರುಗ್ರಾಮ್‌ದ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮಿತ್ ಅರೋರಾ ಮತ್ತು ಇಂಡಿಯಾ ಅಹೆಡ್ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಮೂತಾ ಗೌತಮ್ ಸೇರಿದಂತೆ ಹಲವರನ್ನು ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಎಪಿ ಕಾರ್ಯಕರ್ತ ಮತ್ತು ಓನ್ಲಿ ಮಚ್, ಥ್ಲೌಡರ್, ಮನರಂಜನಾ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಜಿ ಸಿಇಒ ವಿಜಯ್ ನಾಯರ್ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋಯಿನ್‌ಪಲ್ಲಿ ಅವರನ್ನು ಸಹ ತನಿಖಾ ಸಂಸ್ಥೆ ಬಂಧಿಸಿದೆ ಹೇಳಿದರು.

ಸಿಬಿಐ ಆಗಸ್ಟ್‌ನಲ್ಲಿ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹೊರತರಲಾದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶಿಫಾರಸು ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT