ದೇಶ

ಬಿಜೆಪಿ ನಾಯಕನ ಪುತ್ರನ ರೆಸಾರ್ಟ್‌ನಲ್ಲಿ ಅಂಕಿತಾ ಭಂಡಾರಿ ಹತ್ಯೆ: ಅತ್ಯಾಚಾರವಾಗಿಲ್ಲ ಎಂದ ಫೋರೆನ್ಸಿಕ್ ವರದಿ

Ramyashree GN

ಡೆಹ್ರಾಡೂನ್: ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಬಿಜೆಪಿ ನಾಯಕನ ಪುತ್ರನ ರೆಸಾರ್ಟ್‌ನಲ್ಲಿ ಹತ್ಯೆಗೀಡಾಗಿದ್ದ ಅಂಕಿತಾ ಭಂಡಾರಿ ಅವರ ಒಳಾಂಗಗಳ ಮಾದರಿಗಳ ಪ್ರಾಥಮಿಕ ವಿಧಿವಿಜ್ಞಾನ ಪರೀಕ್ಷೆಯ ವರದಿಗಳು ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಬಿಜೆಪಿಯ ಮಾಜಿ ನಾಯಕನ ಮಗ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರು ಅಂಕಿತಾ ಭಂಡಾರಿಯ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದ್ದ ಈ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಲಾಯಿತು.

ಆಕೆಯ ಒಳಾಂಗಗಳ ಮಾದರಿಗಳ ವರದಿಗಳು ಆಕೆಯನ್ನು ಕೊಲ್ಲುವ ಮುನ್ನ ಆಕೆಯ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯವಾಗಿರುವುದು ಪತ್ತೆಯಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದನ್ನು ರಿಷಿಕೇಶದ ಏಮ್ಸ್ ನೀಡಿದ ಮರಣೋತ್ತರ ಪರೀಕ್ಷೆಯ ವರದಿಯೂ ಅಲ್ಲಗಳೆದಿತ್ತು. ಇದೀಗ ಪ್ರಾಥಮಿಕ ವಿಧಿವಿಜ್ಞಾನ ಪರೀಕ್ಷೆಯ ವರದಿಗಳು ಕೂಡ ಇದನ್ನೂ ತಳ್ಳಿಹಾಕಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರನ್ನು ಜೈಲಿಗೆ ಅಟ್ಟಲಾಗಿದ್ದು, ಸದ್ಯ ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ.

ಡಿಐಜಿ ಪಿ.ರೇಣುಕಾ ದೇವಿ ನೇತೃತ್ವದ ಎಸ್‌ಐಟಿ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ನಂತರ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 24 ರಂದು ಉತ್ತರಾಖಂಡದ ಋಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಅಂಕಿತಾ ಭಂಡಾರಿ (19) ಮೃತದೇಹ ಪತ್ತೆಯಾಗಿತ್ತು.

SCROLL FOR NEXT