ಜೈಪುರ: ದೇಶದಲ್ಲಿ ಮತ್ತೊಂದು ವೈಫ್ ಸ್ವಾಪ್ ಗೇಮ್ ಪ್ರಕರಣ ವರದಿಯಾಗಿದ್ದು, ಬೇರೆಯವರೊಂದಿಗೆ ಲೈಂಗಿಕತೆಗೆ ನಿರಾಕರಿಸಿದ ಕಾರಣ ಪತ್ನಿ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ರಾಜಸ್ತಾನದಲ್ಲಿ ವರದಿಯಾಗಿದೆ.
ರಾಜಸ್ಥಾನದ ಬಿಕಾನೇರ್ನ ಹೋಟೆಲ್ ರೂಮ್ನಲ್ಲಿ ಈ ಘಟನೆ ವರದಿಯಾಗಿದ್ದು, ಬೇರೆಯವರೊಂದಿಗೆ ಲೈಂಗಿಕ ಕ್ರಿಯೆ (ವೈಫ್ ಸ್ವಾಪ್ ಗೇಮ್) (wife swap game) ನಡೆಸಲು ನಿರಾಕರಿಸಿದ ಪತ್ನಿ ಮೇಲೆ ಪತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಬಿಕಾನೇರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ಭೋಪಾಲ್ನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಿಕಾನೇರ್ನ 5-ಸ್ಟಾರ್ ಹೋಟೆಲ್ನಲ್ಲಿ ಮ್ಯಾನೇಜರ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, ಪತಿ ಅಮ್ಮರ್ ಹೋಟೆಲ್ ಕೋಣೆಯಲ್ಲಿ ತನ್ನನ್ನು ಲಾಕ್ ಮಾಡಿ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದನು. ಎರಡು ದಿನಗಳ ನಂತರ ಅಮ್ಮರ್ ಕುಡಿದ ಅಮಲಿನಲ್ಲಿ ಮತ್ತೆ ಬಿಕಾನೇರ್ ಹೊಟೆಲ್ ಗೆ ಬಂದನು. ಅಮ್ಮರ್ ಮದ್ಯಪಾನ, ಮಾದಕ ದ್ರವ್ಯ ವ್ಯಸನನಾಗಿದ್ದ. ಅಲ್ಲದೇ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು. ಹುಡುಗಿಯರಷ್ಟೇ ಅಲ್ಲದೇ ಹುಡುಗರೊಂದಿಗೂ ಲೈಂಗಿಕ ಕ್ರಿಯೆ ನಡೆಸುವುದು ಅವನಿಗೆ ಸಾಮಾನ್ಯವಾಗಿತ್ತು. ನನಗೂ ಬೇರೆಯವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ನನ್ನ ಮೇಲೆ ಹಲ್ಲೆಗೈದು, ಸಂಸ್ಕಾರ ಇಲ್ಲದವಳು ಎಂದು ನಿಂದಿಸಿದನು ಎಂದು ಹೇಳಿದ್ದಾರೆ.
ಅಲ್ಲದೆ ನನ್ನೊಂದಿಗೆ ಹಲವು ಬಾರಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಮನಸೋ ಇಚ್ಛೆ ಥಳಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಪತಿ ಮನೆಯವರಿಂದಲೂ ವರದಕ್ಷಿಣೆಗಾಗಿ ಕಿರುಕುಳ
ತನ್ನ ಪತಿಯೊಂದಿಗೆ ಅತ್ತೆ ಮತ್ತು ಅತ್ತಿಗೆ ಇಬ್ಬರೂ 50 ಲಕ್ಷ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ನನ್ನ ಮಾತಿಗೆ ಅತ್ತೆ ಕೊಂಚವು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅಲ್ಲದೇ ನಾನು ಮಾಡ್ರೆನ್ ಆಗಿದ್ದರಿಂದ ನಿಂದಿಸುತ್ತಿದ್ದರು. ಹಲವಾರು ತಿಂಗಳಿಂದ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ನನ್ನ ಪತಿ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆರೋಗ್ಯ ಹದಗೆಟ್ಟಿತು. ಹೀಗಾಗಿ ಆತನ ಸಂಬಂಧಿಕರು ನನ್ನ ತಾಯಿ ಮನೆಗೆ ಕರೆದೊಯ್ದರು. ಇದಾದ ಬಳಿಕ ಪತಿ ವಿರುದ್ಧ ದೂರು ನೀಡುತ್ತಿರುವುದಾಗಿ ಮಹಿಳೆ ದೂರಿದ್ದಾರೆ.
ಇದೀಗ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 377, 498ಎ, 323, 506, 34, 3/4 ಅಡಿಯಲ್ಲಿ ಆರೋಪಿ ಪತಿ ಮತ್ತು ಆತನ ತಾಯಿ ಹಾಗೂ ಅತ್ತಿಗೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.