ದೇಶ

ಮಾಂಡೋಲಿ ಕಾರಾಗೃಹದಿಂದ ಸುಕೇಶ್ ಚಂದ್ರಶೇಖರ್ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ನಿರಾಕರಣೆ

Ramyashree GN

ನವದೆಹಲಿ: ನಗರದ ಮಾಂಡೋಲಿ ಜೈಲಿನಿಂದ ಕಾರಾಗೃಹಗಳ ಮಹಾನಿರ್ದೇಶಕರ ನಿಯಂತ್ರಣಕ್ಕೆ ಒಳಪಡದ ಬೇರೆ ಯಾವುದೇ ಜೈಲಿಗೆ ವರ್ಗಾಯಿಸುವಂತೆ ಕೋರಿ ಸುಲಿಗೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಸಲ್ಲಿಸಿರುವ ಹೊಸ ಮನವಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿಟಿ ರವಿಕುಮಾರ್ ಅವರಿದ್ದ ಪೀಠವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.

'ಅರ್ಜಿಯನ್ನು ಪರಿಗಣಿಸಲು ನಮಗೆ ಯಾವುದೇ ಕಾರಣವಿಲ್ಲ. ಈ ರೀತಿಯ ನಡವಳಿಕೆಯನ್ನು ನಾವು ಬೆಂಬಲಿಸುವುದಿಲ್ಲ' ಎಂದು ಪೀಠ ಹೇಳಿದೆ.

ಆಪಾದಿತ ಆರೋಪಿ ಪರ ವಾದ ಮಂಡಿಸಿದ ವಕೀಲರು, 'ಹಲವು ಭರವಸೆಗಳ ಹೊರತಾಗಿಯೂ ಜೈಲಿನಲ್ಲಿ ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಜೈಲಿನಲ್ಲಿ ತಿಂಗಳಿಗೆ 25 ಲಕ್ಷ ನೀಡುವಂತೆ ಚಂದ್ರಶೇಖರ್ ಮೇಲೆ ಒತ್ತಡ ಹೇರಲಾಗುತ್ತಿದೆ' ಎಂದು ವಕೀಲರು ಆರೋಪಿಸಿದ್ದಾರೆ.

ಚಂದ್ರಶೇಖರ್ ಮತ್ತು ಅವರ ಪತ್ನಿಯನ್ನು ತಿಹಾರ್ ಜೈಲಿನಿಂದ ನಗರದ ಮಾಂಡೋಲಿ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್ 23 ರಂದು ಆದೇಶ ನೀಡಿತ್ತು.

ಚಂದ್ರಶೇಖರ್ ಮತ್ತು ಅವರ ಪತ್ನಿ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೆಹಲಿಯ ಹೊರಗಿನ ಯಾವುದಾದರೂ ಜೈಲಿಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ ಮನವಿ ಮೇರೆಗೆ ಪೀಠ ಈ ರೀತಿಯ ಆದೇಶವನ್ನು ಹೊರಡಿಸಿದೆ.

ಉದ್ಯಮಿಗಳಿಗೆ ವಂಚನೆ ಮತ್ತು ಸುಲಿಗೆ ಮಾಡಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದಾರೆ.

ದೆಹಲಿ ಕಾರಾಗೃಹಗಳ ಮಹಾನಿರ್ದೇಶಕರು ಈ ಹಿಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಜೈಲಿನಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚಂದ್ರಶೇಖರ್ ಸಲ್ಲಿಸಿರುವ ಅರ್ಜಿಯಲ್ಲಿರುವ ಎಲ್ಲಾ ವಿಚಾರಗಳು ಸಂಪೂರ್ಣವಾಗಿ ಸುಳ್ಳು ಮತ್ತು ದುಷ್ಕೃತ್ಯಗಳು ಮತ್ತು ಅಪರಾಧಗಳನ್ನು ಪುನರಾವರ್ತಿಸಲು ಬೇರೆ ಕಾರಾಗೃಹಕ್ಕೆ ವರ್ಗಾಯಿಸುವ ಉದ್ದೇಶದಿಂದ ಈ ಕಟ್ಟುಕಥೆಗಳನ್ನು ರೂಪಿಸಲಾಗಿದೆ ಎಂದು ಕಟುವಾಗಿ ಹೇಳಿದ್ದರು.

ಅಕ್ರಮ ಹಣ ವರ್ಗಾವಣೆ, ಸುಲಿಗೆ ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಸೇರಿದಂತೆ ಸಾರ್ವಜನಿಕ ಅಧಿಕಾರಿಗಳ ಸೋಗಿನಲ್ಲಿ ತೊಡಗಿದ್ದರು ಎಂದು ಜೂನ್ 20 ರಂದು  ಇ.ಡಿ ಚಂದ್ರಶೇಖರ್ ವಿರುದ್ಧ ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದು, ದೆಹಲಿಯ ಹೊರಗಿನ ಜೈಲು ವರ್ಗಾವಣೆಯ ಆತನ ಮನವಿಯನ್ನು ವಿರೋಧಿಸಿತ್ತು.

SCROLL FOR NEXT