ದೇಶ

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ, 200 ರೂ. ದಂಡ: ದೆಹಲಿ ಸಚಿವ

Ramyashree GN

ನವದೆಹಲಿ: ದೀಪಾವಳಿ ಹಬ್ಬದಂದು ದೆಹಲಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಬುಧವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಧಾನಿಯಲ್ಲಿ ಪಟಾಕಿ ಉತ್ಪಾದನೆ, ಶೇಖರಣೆ ಮತ್ತು ಮಾರಾಟಕ್ಕೆ 5,000 ರೂ.ವರೆಗೆ ದಂಡ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9 ಬಿ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಸೆಪ್ಟೆಂಬರ್‌ನಲ್ಲಿ, ನಗರಾಡಳಿತವು ದೀಪಾವಳಿ ಸೇರಿದಂತೆ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಜನವರಿ 1 ರವರೆಗೆ ಸಂಪೂರ್ಣ ನಿಷೇಧಿಸಿದೆ. ಕಳೆದ ಎರಡು ವರ್ಷಗಳಿಂದ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.

ಅಕ್ಟೋಬರ್ 21 ರಂದು 'ದಿಯೇ ಜಲವೋ ಪತಾಖೆ ನಹಿ" ಎಂಬ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. 'ದೆಹಲಿಯಲ್ಲಿ ಪಟಾಕಿಗಳನ್ನು ಖರೀದಿಸುವುದು ಮತ್ತು ಸಿಡಿಸುವುದು ಭಾರತೀಯ ದಂಡ ಸಂಹಿತೆಯಡಿಯಲ್ಲಿ 200 ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗುತ್ತದೆ'. ಪಟಾಕಿ ನಿಷೇಧವನ್ನು ನೋಡಿಕೊಳ್ಳಲು 408 ತಂಡಗಳನ್ನು ರಚಿಸಲಾಗಿದೆ ಎಂದು ರೈ ಹೇಳಿದರು.

ದೆಹಲಿ ಸರ್ಕಾರವು ಶುಕ್ರವಾರ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ 51,000 ದೀಪಗಳನ್ನು ಬೆಳಗಿಸಲಿದೆ.

ದೆಹಲಿ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತರ ಅಡಿಯಲ್ಲಿ 210 ತಂಡಗಳನ್ನು ರಚಿಸಿದ್ದರೆ, ಕಂದಾಯ ಇಲಾಖೆ 165 ತಂಡಗಳನ್ನು ರಚಿಸಿದೆ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು 33 ತಂಡಗಳನ್ನು ನಿಯೋಜಿಸಿದೆ.

ಅಕ್ಟೋಬರ್ 16 ರವರೆಗೆ 188 ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಮತ್ತು 2,917 ಕೆಜಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

SCROLL FOR NEXT